ಬೆಂಗಳೂರು: ಕರ್ನಾಟಕದಲ್ಲಿ 2024-25ನೇ ಸಾಲಿನಲ್ಲಿ 8,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ 929 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅಭಿವೃದ್ಧಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ.

ಈ ಕಾಮಗಾರಿಗಳಲ್ಲಿ ಹೆದ್ದಾರಿಗಳನ್ನು ಅಗಲಗೊಳಿಸುವುದು, ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸುವುದು, ಹೆದ್ದಾರಿಗಳ ವಿಸ್ತರಣೆ, ಅಪಘಾತ ಸ್ಥಳಗಳನ್ನು ಸರಿಪಡಿಸುವುದು ಮತ್ತು ಬೈಪಾಸ್ ಗಳನ್ನು ನಿರ್ಮಿಸುವುದು ಸೇರಿವೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ಶಿರಾ ಮತ್ತು ಬೈರನಹಳ್ಳಿ ನಡುವೆ 52 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ (ಎನ್ಎಚ್) ನಿರ್ಮಾಣವನ್ನು 1,000 ಕೋಟಿ ರೂ.ಗಳ ವೆಚ್ಚದಲ್ಲಿ ಅನುಮೋದಿತ ಯೋಜನಾ ಪಟ್ಟಿಯಲ್ಲಿ ಸೇರಿಸಲಾಗಿದೆ.

ಮೂರು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ದೆಹಲಿಯಲ್ಲಿನ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 19ರಲ್ಲಿ ಚಿಕ್ಕಮಗಳೂರು ಪಟ್ಟಣಕ್ಕೆ ಬೈಪಾಸ್ ರಸ್ತೆ, ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಚೂರಿಕಟ್ಟೆ-ಸಾಗರ-ಆನಂದಪುರ, ರಾಷ್ಟ್ರೀಯ ಹೆದ್ದಾರಿ 52ರಲ್ಲಿ ನವಲಗುಂದ ಪಟ್ಟಣ, ಕಾರ್ಕಳ-ಮಲಗೇಟ್, ಜೇವರ್ಗಿ-ಚಾಮರಾಜನಗರ, ಬೈಂದೂರು-ರಾಣೆಬೆನ್ನೂರು, ಸಾಗರ-ಸಿಗಂದೂರು, ಮೂಡಿಗೆರೆ-ಬಾಣಾವರ, ಚಾರ್ಮಾಡಿ ಘಾಟ್ ಮತ್ತು ಆಗುಂಬೆ ಘಾಟ್ ನಡುವೆ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Share.
Exit mobile version