ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಕ್ಯಾಬಿನೆಟ್​ ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾದ ಹಲವು ನಿರ್ಧಾರಗಳ ಬಗ್ಗೆ ಸಚಿವ ಹೆಚ್​ಕೆ ಪಾಟೀಲ್​ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕೌನ್ಸೆಲಿಂಗ್​ ಮೂಲಕ ಸಬ್​ರಿಜಿಸ್ಟ್ರಾರ್ ವರ್ಗಾವಣೆ ಬಗ್ಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸಚಿವ ಹೆಚ್‌.ಕೆ.ಪಾಟೀಲ್​ ಮಾಧ್ಯಮದವರೊಂದಿಗಿ ಮಾತನಾಡಿದ್ದು, ಹಿಂದುಳಿದ ವರ್ಗಗಳ ಇಲಾಖೆಯಡಿ ಭಕ್ತವತ್ಸಲ ವರದಿಯನ್ನು ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಿದೆ. ಸರ್ಕಾರಿ ನೌಕರರ ವರ್ಗಾವಣೆಗೆ ಮಾರ್ಗಸೂಚಿ ಹೊರಡಿಸಲಾಗಿತ್ತು. ಗೈಡ್‌ಲೈನ್ಸ್‌ಗಳಿಗೆ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ಮಾಡಲಾಗಿದೆ ಎಂದು ತಿಳಿಸಿದರು.

ಕೌನ್ಸೆಲಿಂಗ್​ ಮೂಲಕ ಸಬ್​ರಿಜಿಸ್ಟ್ರಾರ್ ವರ್ಗಾವಣೆ ಬಗ್ಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದುವರೆಗೂ ನೇರವಾಗಿ ಸಬ್ ರಿಜಿಸ್ಟ್ರಾರ್ ವರ್ಗಾವಣೆ ಮಾಡಲಾಗುತ್ತಿತ್ತು. ಈಗಿನಿಂದಲೇ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಸರ್ಕಾರ ನಿರ್ಧರಿಸಿದೆ. ಆ ಮೂಲಕ ಅಕ್ರಮ ಹಾಗೂ ಭ್ರಷ್ಟಾಚಾರ ತಡೆಗಟ್ಟಲು ವರ್ಗಾವಣೆಗೆ ಹೊಸ ನೀತಿ ಜಾರಿ ಮಾಡಲಾಗಿದೆ. ಈ ವರ್ಷದಿಂದಲೇ ಕೌನ್ಸೆಲಿಂಗ್​ ಮೂಲಕ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ನೋಂದಣಿ ಇಲಾಖೆಯಲ್ಲಿ ವರ್ಗಾವಣೆ ಪಾರದರ್ಶಕ ಮಾಡಲು ಕೌನ್ಸೆಲಿಂಗ್ ಪದ್ದತಿಯನ್ನು ಜಾರಿಗೆ ತರುತ್ತಿದ್ದೇವೆ. ಎಫ್.ಡಿಎ ಹೊರತುಪಡಿಸಿ ಸಬ್ ರಿಜಿಸ್ಟ್ರಾರ್​​ಗಳಿಗೆ ವರ್ಗಾವಣೆ ಆಗಲಿದೆ. ಕಾರ್ಪೋರೇಷನ್ ಏರಿಯಾದಲ್ಲಿ ಇರುವ ಸಬ್ ರಿಜಿಸ್ಟ್ರಾರ್​ಗಳಿಗೆ ವರ್ಗಾವಣೆ ಕೌನ್ಸೆಲಿಂಗ್ ಅನ್ನು ಇಲಾಖೆಯೇ ನೋಡಿಕೊಳ್ಳಲಿದೆ. ಆ ಮೂಲಕ ಪಾರದರ್ಶಕತೆ ತರಲು ಇದರಿಂದ ಸಾಧ್ಯವಾಗುತ್ತದೆ. ಶೋಷಣೆ ಮುಕ್ತ ವ್ಯವಸ್ಥೆ ರೂಪುಗೊಳ್ಳಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

Share.
Exit mobile version