ಕೋಲಾರ : ಸದ್ಯ ರಾಜ್ಯ ರಾಜಕೀಯದಲ್ಲಿ ಹಗರಣಗಳ ಕುರಿತು ಭಾರಿ ಚರ್ಚೆ ಆಗುತ್ತಿದ್ದೂ, ಅಲ್ಲದೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜೆಡಿಎಸ್ ಈಗಾಗಲೇ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಿವೆ.ಇದರ ಮಧ್ಯ ಇಂತ ಪರಿಸ್ಥಿತಿಯಲ್ಲಿ ಸಿಎಂ ಬದಲಾದರು ಅಚ್ಚರಿ ಇಲ್ಲ ಎಂದು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹೌದು ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗೊಂದಲ ಮಯವಾಗಿದೆ. ಕಾಂಗ್ರೆಸ್ ಪಕ್ಷ ಇದೀಗ ಮನೆ ಒಂದು ಮೂರು ಬಾಗಿಲು ಆಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಗುಂಪುಗಾರಿಕೆ ಇದೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾದರೂ ಅಚ್ಚರಿ ಇಲ್ಲ ಎಂದು ಕೋಲಾರದಲ್ಲಿ ಸಮೃದ್ಧಿ ಮಂಜುನಾಥ್ ಸ್ಫೋಟಕ ಹೇಳಿಕೆ ನೀಡಿದರು.
ಗ್ಯಾರಂಟಿಗಳನ್ನು ತೊಲಗಿಸಿ ಅಭಿವೃದ್ಧಿ ಕಡೆಗೆ ಗಮನ ಕೊಡಿ.ಅನುದಾನ ಇಲ್ಲದೆ ಬರಿಗೈನಲ್ಲಿ ಸಂಸಾರ ಮಾಡುವಂತಾಗಿದೆ.ಈ ಕೆಟ್ಟ ಸರ್ಕಾರ ತೊಲಗಿ ಒಳ್ಳೆಯ ಸರ್ಕಾರ ಬರಬೇಕು. ಐದು ಗ್ಯಾರಂಟಿ ಘೋಷಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಜನರ ಕಿವಿಗೆ ದಾಸವಾಳ ಹೂವು ಇಟ್ಟು ಅಧಿಕಾರಕ್ಕೆ ಬಂದಿದೆ. ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಶಾಸಕ ಮಂಜುನಾಥ್ ಕಿಡಿಕಾರಿದರು.