ನವದೆಹಲಿ : ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮಹಿಳಾ ಟಿ 20 ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಭಾರತ ತಂಡವು ಈ ಪಂದ್ಯಾವಳಿಯಲ್ಲಿ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 12ರಂದು ಕೇಪ್ ಟೌನ್’ನಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ. ಪಂದ್ಯಾವಳಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಐಸಿಸಿ ಮಹಿಳಾ ಟಿ20 ವಿಶ್ವಕಪ್‍ನ ಎಂಟನೇ ಆವೃತ್ತಿಯು ಫೆಬ್ರವರಿ 10, 2023 ರಂದು ಪ್ರಾರಂಭವಾಗಲಿದ್ದು, ಆತಿಥೇಯ ದಕ್ಷಿಣ ಆಫ್ರಿಕಾ ಮೊದಲ ದಿನ ಶ್ರೀಲಂಕಾವನ್ನ ಎದುರಿಸಲಿದೆ. ಪಂದ್ಯಾವಳಿಯ ಪಂದ್ಯಗಳು ಪ್ಯಾರ್ಲ್ ಮತ್ತು ಗಾಸೆಬೆರಾದಲ್ಲಿ ನಡೆಯಲಿದ್ದು, ಕೇಪ್ ಟೌನ್ ನಾಕೌಟ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಫೈನಲ್ ಪಂದ್ಯ 2023ರ ಫೆಬ್ರವರಿ 26ರಂದು ನಡೆಯಲಿದೆ. ಫೈನಲ್ ಪಂದ್ಯಕ್ಕಾಗಿ ಫೆಬ್ರವರಿ 27ರಂದು ಪ್ರತ್ಯೇಕ ಮೀಸಲು ದಿನವನ್ನ ನಿಗದಿಪಡಿಸಲಾಗಿದೆ. ಟೂರ್ನಿಯಲ್ಲಿ, ಭಾರತವು ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ಜೊತೆಗೆ ಗುಂಪು 2ರಲ್ಲಿ ಸ್ಥಾನ ಪಡೆದರೆ, ಗುಂಪು 1ರಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನ ಒಳಗೊಂಡಿದೆ.

Share.
Exit mobile version