ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಸಾಮಾನ್ಯ ವ್ಯಕ್ತಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು ಅಸಾಧಾರಣ ವ್ಯಕ್ತಿಯಾಗಿ ಬೆಳೆದವರು. ತಲೈವಾ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಜಪಾನ್ನಂತಹ ಇತರ ದೇಶಗಳಲ್ಲಿಯೂ ಅಭಿಮಾನಿಗಳನ್ನ ಹೊಂದಿದ್ದಾರೆ. ಕ್ರೇಜ್’ಗೆ ಮತ್ತೊಂದು ಹೆಸರೇ ಇವರಾಗಿದ್ದು, ರಜನಿ ಕೇವಲ ಹೆಸ್ರಲ್ಲಾ, ಬ್ರ್ಯಾಂಡ್. ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಥವಾ ತಮ್ಮ ಉತ್ಪನ್ನವನ್ನ ಜನರಿಗೆ ತಲುಪಲು ಹಲವರು ರಜನಿ ಹೆಸರು ಬಳಕೆ ಮಾಡಿಕೊಳ್ಳಲಾಗ್ತಿದೆ. ಹೀಗಾಗಿ ಸಧ್ಯ ರಜನಿಕಾಂತ್ ವಕೀಲರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸೂಪರ್ಸ್ಟಾರ್ ರಜನಿಕಾಂತ್ ಅವರ ಪರ ವಕೀಲ ಸುಬ್ಬಯ್ಯ ಅವರು ತಮ್ಮ ಅನುಮತಿಯಿಲ್ಲದೇ ಅವರ ಹೆಸರು ಅಥವಾ ಫೋಟೋಗಳನ್ನ ಬಳಸಿದ್ರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾರ್ವಜನಿಕ ನೋಟಿಸ್ ನೀಡಿದ್ದಾರೆ. ಸೂಪರ್ಸ್ಟಾರ್ ರಜನಿಕಾಂತ್ ದಶಕಗಳಿಂದ ಹಲವು ಭಾಷೆಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಅಂತಹವರ ಪ್ರತಿಷ್ಠೆ ಅಥವಾ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತೆ ಯಾರಾದರೂ ನಡೆದುಕೊಂಡರೆ ಕಾನೂನು ಪ್ರಕಾರ ಕ್ರಿಮಿನಲ್ ಕ್ರಮ ಜರುಗಿಸಬೇಕಾಗುತ್ತದೆ ಎಂದರು.
ರಜನಿಕಾಂತ್ ಅವರ ಹೆಸರು, ಧ್ವನಿ ಮತ್ತು ಫೋಟೋಗಳ ಜೊತೆಗೆ ಅವರ ಚಿತ್ರವನ್ನ ಬಳಸಲಾಗುತ್ತಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ವೇದಿಕೆಗಳ ಜೊತೆಗೆ ಕಂಪನಿಗಳು ತಮ್ಮ ಗಮನಕ್ಕೆ ಬಂದಿವೆ. ಆಯಾ ಕಂಪನಿಗಳು ತಮ್ಮ ಉತ್ಪನ್ನಗಳನ್ನ ಜನರ ಬಳಿಗೆ ಕೊಂಡೊಯ್ಯಲು ಮತ್ತು ಜನರನ್ನ ಆಕರ್ಷಿಸಲು ಇವುಗಳನ್ನ ಬಳಸುತ್ತಿರುವುದು ಕಂಡುಬಂದಿದೆ. ಇನ್ನು ಮುಂದೆ ಯಾರೇ ಆಗಲಿ ತಮ್ಮ ಅನುಮತಿಯಿಲ್ಲದೇ ವೈಯಕ್ತಿಕ ಹಾಗೂ ವ್ಯಾವಹಾರಿಕ ಅಗತ್ಯ ಸೇರಿದಂತೆ ಯಾವುದನ್ನಾದರೂ ಬಳಸಿದರೆ ನೋಟಿಸ್ ನೀಡಲಿದ್ದಾರೆ.