ನವದೆಹಲಿ : ಆದಾಯ ತೆರಿಗೆ ಪಾವತಿಸುವ ವ್ಯಕ್ತಿಯು ಅಕ್ಟೋಬರ್ 1, 2022 ರಿಂದ ಅಟಲ್ ಪಿಂಚಣಿ ಯೋಜನೆ (APY) ಖಾತೆಯನ್ನ ತೆರೆಯಲು ಅರ್ಹರಾಗಿರುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ತೆರಿಗೆದಾರರಾಗಿರುವ ಹೂಡಿಕೆದಾರರು ಅಕ್ಟೋಬರ್ 1, 2022 ರಂದು ಅಥವಾ ನಂತರ ಎಪಿವೈ ಯೋಜನೆಗೆ ಸೇರಿದ್ದರೇ ಅವ್ರ ಎಪಿವೈ ಖಾತೆಯನ್ನ ಮುಚ್ಚಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

“ಅಕ್ಟೋಬರ್ 1, 2022 ರಂದು ಅಥವಾ ನಂತ್ರ ಸೇರಿದ ಚಂದಾದಾರರು ನಂತ್ರ ಅರ್ಜಿ ಸಲ್ಲಿಸುವ ದಿನಾಂಕದಂದು ಅಥವಾ ಅದಕ್ಕೂ ಮೊದಲು ಆದಾಯ ತೆರಿಗೆ ಪಾವತಿದಾರರಾಗಿರುವುದು ಕಂಡುಬಂದರೆ, ಎಪಿವೈ ಖಾತೆಯನ್ನ ಮುಚ್ಚಲಾಗುತ್ತದೆ ಮತ್ತು ಇಲ್ಲಿಯವರೆಗೆ ಸಂಗ್ರಹವಾದ ಪಿಂಚಣಿ ಸಂಪತ್ತನ್ನು ಚಂದಾದಾರರಿಗೆ ನೀಡಲಾಗುವುದು” ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಎಪಿವೈ ಎಂಬುದು ಭಾರತೀಯರಿಗೆ ಖಾತರಿಪಡಿಸಿದ ಪಿಂಚಣಿ ಯೋಜನೆಯಾಗಿದ್ದು, ಇದು ಮುಖ್ಯವಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರ ಮೇಲೆ ಕೇಂದ್ರೀಕರಿಸುತ್ತದೆ. ಇದರ ಅಡಿಯಲ್ಲಿ, ಹೂಡಿಕೆದಾರರು ಅವರ ಕೊಡುಗೆಯನ್ನ ಅವಲಂಬಿಸಿ 60 ವರ್ಷ ವಯಸ್ಸಿನಿಂದ ತಿಂಗಳಿಗೆ 1,000 ರಿಂದ 5,000 ರೂ.ಗಳ ಕನಿಷ್ಠ ಖಾತರಿ ಪಿಂಚಣಿಯನ್ನು ಪಡೆಯುತ್ತಾರೆ.

ಚಂದಾದಾರರ ಮರಣದ ನಂತರ ಅದೇ ಪಿಂಚಣಿಯನ್ನ ಚಂದಾದಾರನ ಸಂಗಾತಿಗೆ ಪಾವತಿಸಲಾಗುವುದು. ಇನ್ನು ಚಂದಾದಾರ ಮತ್ತು ಸಂಗಾತಿ ಇಬ್ಬರ ನಿಧನದ ನಂತ್ರ ಚಂದಾದಾರರ 60ನೇ ವಯಸ್ಸಿನವರೆಗೆ ಸಂಗ್ರಹವಾದ ಪಿಂಚಣಿ ಸಂಪತ್ತನ್ನ ನಾಮಿನಿಗೆ ಹಿಂತಿರುಗಿಸಲಾಗುತ್ತದೆ.

ಈ ಯೋಜನೆಗೆ ಕೊಡುಗೆಯನ್ನು ಮಾಸಿಕ / ತ್ರೈಮಾಸಿಕ / ಅರ್ಧ ವಾರ್ಷಿಕ ಆಧಾರದ ಮೇಲೆ ಮಾಡಬಹುದು. ವ್ಯಕ್ತಿಯ ಮರಣದ ಸಂದರ್ಭದಲ್ಲಿ, ಸಂಗಾತಿಯು ಪಿಂಚಣಿಯನ್ನು ಪಡೆಯುತ್ತಾನೆ; ಇಬ್ಬರ ಮರಣದ ನಂತರ, ಪಿಂಚಣಿ ಕಾರ್ಪಸ್ ಅನ್ನು ನಾಮನಿರ್ದೇಶಿತರಿಗೆ ಹಿಂತಿರುಗಿಸಲಾಗುತ್ತದೆ.

Share.
Exit mobile version