ನವದೆಹಲಿ : ದೆಹಲಿ ರಾಷ್ಟ್ರಪತಿ ಭವನದಲ್ಲಿರುವ ಪ್ರಸಿದ್ಧ ಮೊಘಲ್ ಗಾರ್ಡನ್’ನ್ನ ಅಮೃತ್ ಉದ್ಯಾನ್ ಎಂದು ಮರುನಾಮಕರಣ ಮಾಡಿದ ನಂತರ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು ಅಧಿಕೃತವಾಗಿ ಪ್ರಾರಂಭಿಸಿದರು. ಈ ಸಮಯದಲ್ಲಿ ಅಧ್ಯಕ್ಷರು, ಅಮೃತ್ ಉದ್ಯಾನದಲ್ಲಿ ಓಡಾಡಿದ್ದು, ಸಾರ್ವಜನಿಕರಿಗೆ ಭೇಟಿ ನೀಡುವಂತೆ ಆಹ್ವಾನಿಸಿದರು. ಇನ್ನು ಮುರ್ಮು ಅವರು ಉದ್ಯಾನಕ್ಕೆ ಭೇಟಿ ನೀಡಿದ ಫೋಟೋಗಳನ್ನ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.
ರಾಷ್ಟ್ರಪತಿಗಳ ಅಧಿಕೃತ ಟ್ವಿಟರ್ ಖಾತೆಯಿಂದಲೂ ಅಮೃತ್ ಉದ್ಯಾನಕ್ಕೆ ಭೇಟಿ ನೀಡುವಂತೆ ಜನರನ್ನು ಆಹ್ವಾನಿಸಲಾಗಿದೆ. ವಿವಿಧ ರೀತಿಯ ಹೂವುಗಳು ಮತ್ತು ಔಷಧೀಯ ಸಸ್ಯಗಳನ್ನು ನೋಡಲು ಸಾಮಾನ್ಯ ಜನರು ಜನವರಿ 31 ರಿಂದ ಮಾರ್ಚ್ 26 ರವರೆಗೆ ಅಮೃತ್ ಉದ್ಯಾನಕ್ಕೆ ಭೇಟಿ ನೀಡಬಹುದು.
ಅಂದ್ಹಾಗೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ದೃಷ್ಟಿಯಿಂದ ಕೇಂದ್ರ ಸರ್ಕಾರವು ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಉದ್ಯಾನದ ಹೆಸರನ್ನ ಬದಲಾಯಿಸಿದೆ. ಈಗ ಈ ಸುಂದರ ಉದ್ಯಾನವನ್ನ ಅಮೃತ್ ಉದ್ಯಾನ ಎಂದು ಕರೆಯಲಾಗುವುದು. ಪ್ರತಿ ವರ್ಷದಂತೆ ಈ ಬಾರಿಯೂ ಈ ಸುಂದರ ಉದ್ಯಾನವನ್ನ ಸಾಮಾನ್ಯ ಜನರಿಗೆ ತೆರೆಯುವ ಸಮಯ ಬಂದಿದೆ. ಆದರೆ ಈ ಬಾರಿ ಜನರು ಅದರ ಹೆಸರನ್ನು ಮೊಘಲ್ ಉದ್ಯಾನದ ಬದಲಿಗೆ ಅಮೃತ ಉದ್ಯಾನ ಎಂದು ಕರೆಯುತ್ತಾರೆ.
ರಾಷ್ಟ್ರಪತಿ ಭವನದ ಹಿಂಭಾಗದಲ್ಲಿರುವ ಅಮೃತ್ ಉದ್ಯಾನವನವು ಪ್ರಪಂಚದಾದ್ಯಂತದ ವರ್ಣರಂಜಿತ ಹೂವುಗಳನ್ನು ನೋಡಬಹುದಾದ ಏಕೈಕ ಉದ್ಯಾನವಾಗಿದೆ. ವಿವಿಧ ರೀತಿಯ ಹೂವುಗಳು ಮತ್ತು ಹಣ್ಣಿನ ಮರಗಳ ಸಂಗ್ರಹವಿದೆ. ಇಲ್ಲಿನ ಟುಲಿಪ್ಸ್ ಮತ್ತು ಗುಲಾಬಿಗಳನ್ನು ನೋಡಲು ದೇಶ ವಿದೇಶಗಳಿಂದ ಜನರು ಬರುತ್ತಾರೆ.
13 ಎಕರೆಗಳಷ್ಟು ಹರಡಿರುವ ಈ ಉದ್ಯಾನವು ಬ್ರಿಟಿಷ್ ಶೈಲಿ ಮತ್ತು ಮೊಘಲ್ ಶೈಲಿಯ ಮಿಶ್ರಣವನ್ನು ತೋರಿಸುತ್ತದೆ. ಈ ಉದ್ಯಾನದ ವಾಸ್ತುಶಿಲ್ಪಿ ಬ್ರಿಟನ್ನ ಸರ್ ಎಡ್ವಿನ್ ಲುಟ್ಯೆನ್ಸ್. ಈ ಉದ್ಯಾನವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಉದ್ಯಾನದಲ್ಲಿ ಹಲವು ಬಗೆಯ ಹೂವುಗಳನ್ನು ಕಾಣಬಹುದು, ಅದರಲ್ಲಿ ಗುಲಾಬಿ, ಮಾರಿಗೋಲ್ಡ್, ಸ್ವೀಟ್ ವಿಲಿಯಂ, ಟುಲಿಪ್ ಇತ್ಯಾದಿಗಳು ಪ್ರಮುಖವಾಗಿವೆ. ಈ ಉದ್ಯಾನದಲ್ಲಿ ಹೂವುಗಳ ಜೊತೆಗೆ ಗಿಡಮೂಲಿಕೆಗಳು ಮತ್ತು ಔಷಧಗಳನ್ನು ಸಹ ಬೆಳೆಯಲಾಗುತ್ತದೆ.
ಈ ವರ್ಷ, ಈ ಉದ್ಯಾನವು ಜನವರಿ 31 ರಂದು ಪ್ರವಾಸಿಗರಿಗೆ ತೆರೆಯುತ್ತದೆ ಮತ್ತು ಮಾರ್ಚ್ 26 ರವರೆಗೆ ಎರಡು ತಿಂಗಳ ಕಾಲ ತೆರೆದಿರುತ್ತದೆ. ಉದ್ಯಾನವನ್ನು ತೆರೆಯುವ ಸಮಯ ಬೆಳಿಗ್ಗೆ 10 ಮತ್ತು ಮುಚ್ಚುವ ಸಮಯ ಸಂಜೆ 4. ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಪ್ರವಾಸಿಗರು ಇಲ್ಲಿಗೆ ಬರಬಹುದು.
ಮಹಿಳಾ ಸಹೋದ್ಯೋಗಿಯನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಕಾನ್ಸ್ಟೇಬಲ್
ಕಾಶ್ಮೀರದಲ್ಲಿ ಪರಿಸ್ಥಿತಿ ಚೆನ್ನಾಗಿದ್ರೆ ‘ಅಮಿತ್ ಶಾ’ ಇಲ್ಲಿಗೆ ನಡೆದುಕೊಂಡು ಬರಲಿ ; ರಾಹುಲ್ ಗಾಂಧಿ