ಸಿಡ್ನಿ: ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಆರೋನ್ ಫಿಂಚ್ ಅವರು ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ 12 ವರ್ಷಗಳ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಿದ್ದಾರೆ.
2024 ರ ಮುಂದಿನ ಟಿ 20 ವಿಶ್ವಕಪ್ ವರೆಗೆ ನಾನು ಆಡುವುದಿಲ್ಲ ಎಂದು ಅರಿತುಕೊಂಡು, ಟಿ20 ನಾಯಕತ್ವದಿಂದ ಕೆಳಗಿಳಿದು ತಂಡಕ್ಕೆ ಸಮಯ ನೀಡಲು ಇದು ಸರಿಯಾದ ಸಮಯ, 12 ವರ್ಷಗಳ ಕಾಲ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲು ಮತ್ತು ಸಾರ್ವಕಾಲಿಕ ಶ್ರೇಷ್ಠ ಆಟಗಾರರೊಂದಿಗೆ ಮತ್ತು ವಿರುದ್ಧ ಆಡಲು ಸಾಧ್ಯವಾಗಿರುವುದು ನಂಬಲಾಗದ ಗೌರವವಾಗಿದೆ” ಎಂದು ಆರೋನ್ ಫಿಂಚ್ ಹೇಳಿದ್ದಾರೆ.
ಫಿಂಚ್ 2018 ರಲ್ಲಿ ಜಿಂಬಾಬ್ವೆ ವಿರುದ್ಧ 76 ಎಸೆತಗಳಲ್ಲಿ 172 ರನ್ ಗಳಿಸುವ ಮೂಲಕ ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. 2013ರಲ್ಲಿ ಇಂಗ್ಲೆಂಡ್ ವಿರುದ್ಧ 156 ರನ್ ಗಳಿಸಿದ್ದ ಟಿ20 ಕ್ರಿಕೆಟ್ನಲ್ಲಿ 3ನೇ ಅತಿ ಹೆಚ್ಚು ಸ್ಕೋರ್ ಮಾಡಿದ ದಾಖಲೆ ಅವರ ಹೆಸರಿನಲ್ಲಿದೆ.
ಆರೋನ್ ಫಿಂಚ್ ಇಂಗ್ಲೆಂಡ್ ವಿರುದ್ಧ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 254 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಆರೋನ್ ಫಿಂಚ್ 19 ಶತಕಗಳೊಂದಿಗೆ 8804 ರನ್‌ಗಳನ್ನು ಸಿಡಿಸಿದ್ದಾರೆ. ಇಲ್ಲಿಯವರೆಗೂ 103 ಟಿ20 ಪಂದ್ಯಗಳಾಡಿರುವ ಅವರು, 76 ಪಂದ್ಯಗಳನ್ನು ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ.