ಜಮ್ಮು : ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ರಜೌರಿಯಲ್ಲಿರುವ ಸೇನಾ ಶಿಬಿರದ ಮೇಲೆ ಆಗಸ್ಟ್ 11 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡ ಮತ್ತೊಬ್ಬ ಯೋಧ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ರಕ್ಷಣಾ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಅವ್ರು ಮೃತ ಯೋಧನನ್ನ ರಾಜಸ್ಥಾನದ ಜುಂಜುನು ಜಿಲ್ಲೆಯ ಜೈತ್ಪುರ್ ಗ್ರಾಮದ ಹವಿಲ್ದಾರ್ ಸತ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಸತ್ಪಾಲ್ ಸಿಂಗ್ ಕಳೆದ ಹತ್ತು ದಿನಗಳಿಂದ ಉಧಂಪುರದ ಸೇನಾ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿಂಗ್ ಅವರು ಭಾನುವಾರ ಸಂಜೆ ಕೊನೆಯುಸಿರೆಳೆದರು ಎಂದು ಪಿಆರ್‌ಒ ತಿಳಿಸಿದ್ದಾರೆ.

ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವ್ರು ಮೃತ ಯೋಧನ ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿದರು. ಸಿಂಗ್ ಅವರ ಪಾರ್ಥಿವ ಶರೀರವನ್ನ ರಾಜಸ್ಥಾನದ ಅವರ ಹುಟ್ಟೂರಿಗೆ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೆ ನಾಲ್ಕು ದಿನ ಮುಂಚಿತವಾಗಿ ಆಗಸ್ಟ್ 11 ರಂದು ಜಮ್ಮುವಿನ ರಜೌರಿ ಜಿಲ್ಲೆಯ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ನಾಲ್ವರು ಸೈನಿಕರು ಹತರಾಗಿದ್ದರು. ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರನ್ನು ನಾಲ್ಕು ಗಂಟೆಗಳ ಕಾಲ ನಡೆದ ಎನ್ಕೌಂಟರ್ನಲ್ಲಿ ಹೊಡೆದುರುಳಿಸಲಾಗಿದೆ ಎಂದು ಸೇನೆ ತಿಳಿಸಿದೆ.

Share.
Exit mobile version