ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಂಡು ಜಾಲ ಹೆಣೆದಿದ್ದ ಸೈಬರ್ ವಂಚಕರು, ವೃದ್ಧೆಯೊಬ್ಬರನ್ನು ಬರೋಬ್ಬರಿ 24 ಕೋಟಿ ರೂಪಾಯಿ ವಂಚಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ದೈತ್ಯ ‘ಡಿಜಿಟಲ್ ಅರೆಸ್ಟ್’ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮುಂಬೈ, ಅಲಹಾಬಾದ್ ಮತ್ತು ದೆಹಲಿ ಮೂಲದ ಐವರು ಅಂತಾರಾಜ್ಯ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ಗೌರವ್ ಕುಮಾರ್, ಓಂ ಪ್ರಕಾಶ್ ಸೇರಿದಂತೆ ಐವರು ಎಂದು ಗುರುತಿಸಲಾಗಿದೆ.
ತಿಂಗಳುಗಳ ಕಾಲ ನಡೆದ ಕಳ್ಳಾಟ
ಬೆಂಗಳೂರಿನ ಶಿವಾಜಿನಗರದ ನಿವಾಸಿಯಾದ ಲಕ್ಷ್ಮೀ ನಾರಾಯಣ್ ಎಂಬ ವೃದ್ಧೆಯೇ ಈ ಕೋಟ್ಯಂತರ ರೂಪಾಯಿ ವಂಚನೆಗೆ ಒಳಗಾದ ದುರ್ದೈವಿ. ಸೈಬರ್ ಖದೀಮರು ಕಳೆದ ಜನವರಿ ತಿಂಗಳಿನಿಂದಲೇ ಈ ವೃದ್ಧೆಯನ್ನು ತಮ್ಮ ಡಿಜಿಟಲ್ ಜಾಲದಲ್ಲಿ ಸಿಲುಕಿಸಿದ್ದರು. ಕಾನೂನು ಬಾಹಿರ ಚಟುವಟಿಕೆ ಅಥವಾ ತನಿಖೆಯ ಹೆಸರಿನಲ್ಲಿ ವೃದ್ಧೆಯನ್ನು ಹೆದರಿಸಿ, ‘ಡಿಜಿಟಲ್ ಅರೆಸ್ಟ್’ ಮಾದರಿಯಲ್ಲಿ ಮನೆಯಲ್ಲೇ ಬಂಧಿಯಾಗುವಂತೆ ಮಾಡಿದ್ದರು. ಬಂಧನದ ಭೀತಿಯಲ್ಲಿದ್ದ ವೃದ್ಧೆಯಿಂದ ಹಂತ ಹಂತವಾಗಿ ಬರೋಬ್ಬರಿ 24 ಕೋಟಿ ರೂಪಾಯಿಗಳನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ದೋಚಿದ್ದರು.
ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆ
ಇಷ್ಟೆಲ್ಲಾ ಹಣ ಕಳೆದುಕೊಂಡಿದ್ದರೂ ವಂಚಕರ ಬೇಡಿಕೆ ಮಾತ್ರ ನಿಂತಿರಲಿಲ್ಲ. ಮತ್ತಷ್ಟು ಹಣಕ್ಕಾಗಿ ಪೀಡಿಸುತ್ತಿದ್ದಾಗ, ವೃದ್ಧೆ ಲಕ್ಷ್ಮೀ ನಾರಾಯಣ್ ಅವರು ತಮ್ಮ ಬಳಿಯಿದ್ದ ಚಿನ್ನವನ್ನು ಅಡಮಾನ ಇಟ್ಟು ಹಣ ಹೊಂದಿಸಲು ಬ್ಯಾಂಕ್ಗೆ ಧಾವಿಸಿದ್ದರು. ಬ್ಯಾಂಕ್ನಲ್ಲಿ ವೃದ್ಧೆಯ ಆತಂಕ ಹಾಗೂ ಅಸಹಜ ನಡವಳಿಕೆಯನ್ನು ಗಮನಿಸಿದ ಬ್ಯಾಂಕ್ ಮ್ಯಾನೇಜರ್ ತಕ್ಷಣವೇ ಅಲರ್ಟ್ ಆಗಿದ್ದಾರೆ. ವೃದ್ಧೆಯನ್ನು ಸಮಾಧಾನಪಡಿಸಿ ವಿಚಾರಿಸಿದಾಗ ಸೈಬರ್ ವಂಚನೆಯ ಅಸಲಿ ಕಥೆ ಹೊರಬಿದ್ದಿದೆ. ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದಾಗಿ ವೃದ್ಧೆಯ ಬಳಿ ಇದ್ದ ಉಳಿದ ಹಣ ಹಾಗೂ ಒಡವೆಗಳು ವಂಚಕರ ಪಾಲಾಗುವುದು ತಪ್ಪಿದೆ.
ಖಾತೆ ಸೀಜ್, ತನಿಖೆ ಚುರುಕು
ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಬೆಂಗಳೂರು ಸಿಸಿಬಿ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ಸದ್ಯ ದೇಶದ ವಿವಿಧ ನಗರಗಳಲ್ಲಿ ಅಡಗಿದ್ದ ಐವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ, ವಂಚಕರು ಬಳಸುತ್ತಿದ್ದ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 60 ಲಕ್ಷ ರೂಪಾಯಿ ನಗದನ್ನು ಸಿಸಿಬಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ದೈತ್ಯ ಜಾಲದ ಹಿಂದೆ ಬೇರೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.








