ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ನಡೆದ ಅತ್ಯಂತ ಅಮಾನುಷ ಹಾಗೂ ಘೋರ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಪತಿಯೊಂದಿಗೆ ಜಗಳವಾಡಿ ತವರಿಗೆ ತೆರಳುತ್ತಿದ್ದ ಅಸಹಾಯಕ ಮಹಿಳೆಯನ್ನೇ ಗುರಿಯಾಗಿಸಿಕೊಂಡು ಕಿರಾತಕರು ತಮ್ಮ ವಿಕೃತ ಕಾಮವನ್ನು ತೀರಿಸಿಕೊಂಡಿದ್ದಾರೆ. ಈ ಜುಗುಪ್ಸಾಕರ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ಹಿನ್ನೆಲೆಯನ್ನು ನೋಡುವುದಾದರೆ, ಕಳೆದ ಜೂನ್ 3ರಂದು ತಡರಾತ್ರಿ ಈ ಭೀಕರ ಕೃತ್ಯ ನಡೆದಿದೆ. ಸಂತ್ರಸ್ತ ಮಹಿಳೆಯು ತನ್ನ ಪತಿಯೊಂದಿಗೆ ಕೌಟುಂಬಿಕ ಕಾರಣಗಳಿಗಾಗಿ ಜಗಳವಾಡಿಕೊಂಡಿದ್ದರು. ಬಳಿಕ ನೊಂದು ತನ್ನ ತಾಯಿಯ ಮನೆಗೆ ಹೋಗಲು ನಿರ್ಧರಿಸಿ, ತಡರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಒಂಟಿ ಮಹಿಳೆ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಕಾಮುಕರು ಆಕೆಯನ್ನು ಅಡ್ಡಗಟ್ಟಿದ್ದಾರೆ.
ರಾತ್ರಿ ವೇಳೆ ಬಾಯಾರಿಕೆಯಾಗಿದ್ದ ಮಹಿಳೆಗೆ ಕುಡಿಯಲು ನೀರು ಕೊಡುವ ನೆಪದಲ್ಲಿ ಕಿರಾತಕರು ಮದ್ಯವನ್ನು ಕುಡಿಸಿದ್ದಾರೆ. ಮಹಿಳೆ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ನರಾಧಮರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಇಷ್ಟಕ್ಕೇ ನಿಲ್ಲದ ಈ ವಿಕೃತ ಮನಸ್ಸಿನ ಯುವಕರು, ಇಡೀ ಕೃತ್ಯವನ್ನು ತಮ್ಮ ಮೊಬೈಲ್ ಫೋನ್ಗಳಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಕೃತ್ಯದ ಬಳಿಕ ಮಹಿಳೆಗೆ ಬೆದರಿಕೆ ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್: ಅತ್ಯಾಚಾರವೆಂಬ ಘೋರ ಅಪರಾಧ ಎಸಗಿದ ನಂತರವೂ ಕಿರಾತಕರಲ್ಲಿ ಯಾವುದೇ ಭಯವಿರಲಿಲ್ಲ. ಬದಲಿಗೆ ತಾವು ಮಾಡಿದ ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಹರಿದಾಡಲು ತೊಡಗಿದಾಗ, ಸ್ವತಃ ಸಂತ್ರಸ್ತ ಮಹಿಳೆಯ ಗಮನಕ್ಕೆ ಬಂದಿದೆ. ಇದರಿಂದ ತೀವ್ರ ಆಘಾತಕ್ಕೊಳಗಾದ ಮಹಿಳೆ ತಕ್ಷಣವೇ ಧೈರ್ಯ ಮಾಡಿ ಬಸವಾಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಮಹಿಳೆಯ ದೂರಿನ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಬಸವಾಪಟ್ಟಣ ಠಾಣೆಯ ಪೊಲೀಸರು ಭೇಟೆಯಾಡಿದ್ದಾರೆ. ಅತ್ಯಾಚಾರ ಎಸಗಿದವರು, ವಿಡಿಯೋ ಚಿತ್ರೀಕರಣ ಮಾಡಿದವರು ಹಾಗೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡವರನ್ನು ಪತ್ತೆ ಹಚ್ಚಿ, ಒಟ್ಟು 10 ಮಂದಿ ಯುವಕರನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನೊಂದೆಡೆ, ಈ ಪ್ರಕರಣ ಹೊಸದೊಂದು ತಿರುವು ಪಡೆದುಕೊಂಡಿದೆ. ಬಂಧಿತ ಆರೋಪಿಗಳ ತಾಯಂದಿರು ಪೊಲೀಸ್ ಠಾಣೆಯ ಮುಂದೆ ಬಂದು ಕಣ್ಣೀರು ಹಾಕುತ್ತಿದ್ದಾರೆ. “ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ, ಅವರು ಅತ್ಯಂತ ಅಮಾಯಕರು” ಎಂದು ಹೇಳುತ್ತಾ ಕಣ್ಣೀರಿಡುತ್ತಿರುವುದು ಕಂಡುಬಂದಿದೆ. ಆದರೆ, ವಿಡಿಯೋ ಸಾಕ್ಷ್ಯಗಳು ಕಣ್ಣಮುಂದೆಯೇ ಇರುವುದರಿಂದ ಪೊಲೀಸರು ಕಾನೂನು ಕ್ರಮವನ್ನು ಬಿಗಿಗೊಳಿಸಿದ್ದು, ಸಂತ್ರಸ್ತೆಗೆ ನ್ಯಾಯ ಒದಗಿಸಲು ತನಿಖೆ ಚುರುಕುಗೊಳಿಸಿದ್ದಾರೆ.








