ಶಿವಮೊಗ್ಗ: ಭದ್ರಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಹಾಗೂ ವಕೀಲರೊಬ್ಬರ ವಿರುದ್ಧ ಅತ್ಯಾಚಾರ ಮತ್ತು ಬ್ಲ್ಯಾಕ್ಮೇಲ್ ಆರೋಪ ಕೇಳಿಬಂದಿದ್ದು, ಸಂತ್ರಸ್ತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಬಿಜೆಪಿ ಮುಖಂಡ, ವಕೀಲ ಭರತ್ ಬಿ.ಎಸ್. ಎಂಬುವವರ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದ್ದು, ಸದ್ಯ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಭರತ್, 23 ವರ್ಷದ ವಿವಾಹಿತ ಮಹಿಳೆಗೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ. ತಾನು ಆಕೆಯ ಪತಿಯ ಸ್ನೇಹಿತ ಎಂದು ಹೇಳಿಕೊಂಡು ಆಕೆಗೆ ಹತ್ತಿರವಾಗಿದ್ದ ಎನ್ನಲಾಗಿದೆ. ಅಲ್ಲದೆ, ಮಹಿಳೆ ನಡೆಸುತ್ತಿದ್ದ ದಿನಸಿ ಅಂಗಡಿಗೆ ಪದೇ ಪದೇ ಬರುತ್ತಿದ್ದ ಈತ, ಆಕೆಯ ಮೈ ಕೈ ಮುಟ್ಟಿ ವಿಕೃತ ಆನಂದ ಪಡುತ್ತಾ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಳೆದ ಏಪ್ರಿಲ್ 11 ರಂದು ಸಂತ್ರಸ್ತೆಯ ಪತಿಯು ತನಗೆ ಹಣದ ತುರ್ತು ಇದ್ದಿದ್ದರಿಂದ, “ನನ್ನ ಸ್ನೇಹಿತ ಭರತ್ ಮನೆಗೆ ಬರುತ್ತಾನೆ, ಆತನಿಗೆ ಹಣ ನೀಡು” ಎಂದು ಪತ್ನಿಗೆ ತಿಳಿಸಿದ್ದರು. ಪತಿಯ ಸೂಚನೆಯಂತೆ ಮಹಿಳೆ ಹಣ ನೀಡಲು ಮುಂದಾಗಿದ್ದಾರೆ. ಈ ವೇಳೆ ಮನೆಯಲ್ಲಿ ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿದ ಆರೋಪಿ ಭರತ್, ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಮಾನಹಾನಿ ಮಾಡುವುದಾಗಿ ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಹಣದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದ.
ಬಳಿಕ ಏಪ್ರಿಲ್ 25 ರಂದು ಆರೋಪಿ ಭರತ್ ಮತ್ತೆ ಮಹಿಳೆಯ ದಿನಸಿ ಅಂಗಡಿಗೆ ಬಂದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಇಷ್ಟೆಲ್ಲಾ ದೌರ್ಜನ್ಯ ನಡೆದರೂ ಮಹಿಳೆ ಹೆದರಿ ಸುಮ್ಮನಾಗಿದ್ದರು. ಇತ್ತೀಚೆಗೆ ಪತ್ನಿಯ ಮೊಬೈಲ್ ನೋಡುತ್ತಿದ್ದ ಪತಿಗೆ, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭರತ್ನ ಪ್ರೊಫೈಲ್ ಬ್ಲಾಕ್ ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಪತ್ನಿಯನ್ನು ತೀವ್ರವಾಗಿ ಪ್ರಶ್ನಿಸಿದಾಗ, ಆಕೆ ಕಣ್ಣೀರು ಹಾಕುತ್ತಾ ತನಗಾದ ಅನ್ಯಾಯ ಮತ್ತು ಅತ್ಯಾಚಾರದ ಘಟನೆಯನ್ನು ಬಿಚ್ಚಿಟ್ಟಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆ ಪತಿಯು ಪತ್ನಿಯ ಹೆಸರಿನಲ್ಲಿ ವಾಟ್ಸಾಪ್ ಚಾಟ್ ಮಾಡುವ ಮೂಲಕ ಆರೋಪಿ ಭರತ್ನ ಅಸಲಿ ಬುದ್ಧಿ ಮತ್ತು ಸಂಚನ್ನು ಪತ್ತೆ ಹಚ್ಚಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ದಂಪತಿ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ ಹಾಗೂ ಪ್ರಾಣ ಬೆದರಿಕೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.








