ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣಕ್ಕೆ ಕೇವಲ ಸಚಿವ ನಾಗೇಂದ್ರರ ರಾಜೀನಾಮೆ ಪರಿಹಾರವಲ್ಲ. ಸಚಿವ ಶರಣಪ್ರಕಾಶ ಪಾಟೀಲ್ ಅವರು ನಾಗೇಂದ್ರರ ಜೊತೆ ಇದ್ದಾರೆ. ಹಗರಣದಲ್ಲಿ ನಿಗಮದ ಅಧ್ಯಕ್ಷರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದ್ದು, ಇವರೆಲ್ಲರೂ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಅವರು ಆಗ್ರಹಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇರುವ ಮೂವರಲ್ಲಿ ಕದ್ದವರು ಯಾರು ಎಂಬಂತಾಗಿದೆ ಪರಿಸ್ಥಿತಿ. ಒಬ್ಬರ ಮೇಲೆ ಇನ್ನೊಬ್ಬರು ಬೆಟ್ಟು ತೋರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಪರಿಶಿಷ್ಟ ಪಂಗಡಗಳ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಮೊತ್ತದ ಬೃಹತ್ ಹಗರಣದಲ್ಲಿ ಭಾಗಿಯಾದ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಈಗಾಗಲೇ ಎಸ್‍ಟಿ ಮೋರ್ಚಾ ರಾಜ್ಯಾದ್ಯಂತ ಹೋರಾಟ ಮಾಡುತ್ತಿದೆ ಎಂದು ವಿವರಿಸಿದರು.

187 ಕೋಟಿ ಹಣದಲ್ಲಿ ಬಹಳಷ್ಟು ಮೊತ್ತ ದುರ್ಬಳಕೆ ಆಗಿದೆ. 89 ಕೋಟಿ ಹಣವನ್ನು ಲೀಲಾಜಾಲವಾಗಿ ಬಳಸಿಕೊಂಡಿದೆ. 700ಕ್ಕೂ ಅಧಿಕ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಮೂಲಕ ಹಣ ದುರ್ಬಳಕೆ ಆಗಿದೆ. ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ದಾವಣಗೆರೆ, ತೆಲಂಗಾಣದ ಹೈದರಾಬಾದ್ ಗಳಲ್ಲಿ ಖಾತೆ ತೆರೆಯಲಾಗಿತ್ತು ಎಂದು ತಿಳಿಸಿದರು.

ಕೂಲಿ ಕಾರ್ಮಿಕರು, ದನ, ಎಮ್ಮೆ ಕಾಯುವ ಅಮಾಯಕ ವ್ಯಕ್ತಿಗಳಿಗೆ 2 ಲಕ್ಷದಿಂದ 5 ಲಕ್ಷದವರೆಗೆ ಹಣ ಹಾಕಿ ವಿತ್‍ಡ್ರಾ ಮಾಡಿ ಲೋಕಸಭಾ ಚುನಾವಣೆಗೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಬಳಸಿಕೊಂಡ ಮಾಹಿತಿ ಇದೆ ಎಂದು ಹೇಳಿದರು. ಎಂಡಿ ಪದ್ಮನಾಭ ತಮ್ಮ ಸಹಿ ಅಲ್ಲ ಎಂದು ಹೇಳಿದರೆ, ಅದು ಅವರದೇ ಸಹಿ ಎಂದು ಬ್ಯಾಂಕಿನವರು ಹೇಳಿದ್ದಾರೆ. ಇದರಲ್ಲಿ ಯಾವುದು ಸತ್ಯ ಎಂದು ಮುಖ್ಯಮಂತ್ರಿಗಳು ಉತ್ತರ ನೀಡಬೇಕೆಂದು ಆಗ್ರಹಿಸಿದರು.

ಬೇರೊಂದು ಬ್ಯಾಂಕಿನಲ್ಲಿ ಖಾತೆ ತೆರೆದಾಗ ಆರ್ಥಿಕ ಇಲಾಖೆ ಗಮನಕ್ಕೆ ಯಾಕೆ ಬರಲಿಲ್ಲ? ಸ್ವತಃ ಹಣಕಾಸು ಇಲಾಖೆ ಜವಾಬ್ದಾರಿ ನಿರ್ವಹಿಸುವ ಸಿದ್ದರಾಮಯ್ಯನವರು ಇದಕ್ಕೆ ಹೊಣೆಗಾರರಲ್ಲವೇ? ಆ ಹಣವನ್ನು ಮರುವರ್ಗಾವಣೆ ಮಾಡಿಸಿದ ವ್ಯಕ್ತಿಗಳು ಯಾರ್ಯಾರು? ಯಾಕೆ ಅವರನ್ನು ಬಂಧಿಸಿಲ್ಲ? ಅವರನ್ನು ಯಾಕೆ ತನಿಖೆಗೆ ಒಳಪಡಿಸಿಲ್ಲ ಎಂದು ಕೇಳಿದರು.

ಕೇಂದ್ರ ಸರಕಾರವು ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳಿಗೆ ಬಿಡುಗಡೆ ಮಾಡಿದ 83 ಕೋಟಿ ಮೊತ್ತವನ್ನು ಕಲ್ಲೇಶ್ ಎಂಬ ಅಧಿಕಾರಿ ಮತ್ತು ಅವರ ತಂಡ ದುರುಪಯೋಗ- ದುರ್ಬಳಕೆ ಮಾಡಿಕೊಂಡಿದೆ. ಇದು ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದೆ. ಬಳಿಕ ಅಮಾನತು ಮಾಡಲಾಗಿದೆ ಎಂದರಲ್ಲದೆ, ಕಲ್ಲೇಶ್ ಬಂಧಿಸಿ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದರು. ಕಲ್ಲೇಶ್, ಸರಕಾರದ ಒಪ್ಪಿಗೆ ಇಲ್ಲದೆ ತಾನೇ ಸ್ವಯಂಘೋಷಿತವಾಗಿ ಟೆಂಡರ್ ಕರೆದಿದ್ದರು ಎಂದು ತಿಳಿಸಿದರು.

ಗದಗ್ ಜಿಲ್ಲೆಯ ಶಾಲೆಗಳಿಗೆ ಪುಸ್ತಕ ಮುದ್ರಿಸಿಕೊಟ್ಟು ಬಿಲ್ ಹಣ ವಿತ್‍ಡ್ರಾ ಮಾಡಿದ್ದಾನೆ. ಹಿಂದುಳಿದ ವರ್ಗಕ್ಕೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಅನಧಿಕೃತವಾಗಿ ಹಣ ಬಿಡುಗಡೆ ಮಾಡಿದ್ದಾನೆ. ವಸ್ತುಗಳ ಅನಧಿಕೃತ ಖರೀದಿ, ಪೌಷ್ಟಿಕ ಆಹಾರ ಖರೀದಿಯಲ್ಲಿ ಅನೇಕ ಅವ್ಯವಹಾರ ಮಾಡಿದ್ದಾಗಿ ವಿವರ ನೀಡಿದರು.

ರಾಜ್ಯ ಬಿಜೆಪಿಯ ನಿಕಟಪೂರ್ವ ಕಾರ್ಯದರ್ಶಿ ಜಗದೀಶ ಹಿರೇಮನಿ ಅವರು ಹಾಜರಿದ್ದರು.

ತುರ್ತು ಪರಿಸ್ಥಿತಿ ಪ್ರಸ್ತಾಪ ತಪ್ಪಿಸಬಹುದಿತ್ತು: ಲೋಕಸಭಾ ಸ್ಪೀಕರ್ ಭೇಟಿ ಮಾಡಿದ ರಾಹುಲ್ ಗಾಂಧಿ

ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ : ಸ್ನಾತಕ/ಸ್ನಾತಕೋತ್ತರ ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

Share.
Exit mobile version