ಲಾಕ್‌ಡೌನ್‌ ನಿಯಮ ಮೀರಿ ಅದ್ದೂರಿಯಾಗಿ ಜನ್ಮ ದಿವಸ ಆಚರಣೆ ಮಾಡಿದ ಬಿಜೆಪಿ ಶಾಸಕ – Kannada News Now


State

ಲಾಕ್‌ಡೌನ್‌ ನಿಯಮ ಮೀರಿ ಅದ್ದೂರಿಯಾಗಿ ಜನ್ಮ ದಿವಸ ಆಚರಣೆ ಮಾಡಿದ ಬಿಜೆಪಿ ಶಾಸಕ

ತುಮಕೂರು : ದೇಶಾದ್ಯಂತ ಕೊರೊನಾ ಭೀತಿಯಿಂದಾಗಿ ಲಾಕ್ ಡೌನ್ ಘೋಷಣೆಯಾಗಿದೆ. ಒಂದಕ್ಕಿಂತ ಹೆಚ್ಚು ಜನರು ಸೇರುವುದು, ಸಭೆ-ಸಮಾರಂಭ ಆಚರಿಸುವುದಕ್ಕೆ ನಿರ್ಬಂಧಿಸಲಾಗಿದೆ. ಹೀಗಿದ್ದೂ ಬಿಜೆಪಿಯ ಶಾಸಕರೊಬ್ಬರು ಲಾಕ್ ಡೌನ್ ಗೂ ಡೋಂಟ್ ಕೇರ್ ಎಂಬುದಾಗಿ ಅದ್ದೂರಿಯಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅಲ್ಲದೇ ಹುಟ್ಟು ಹಬ್ಬದ ಆಚರಣೆಗೆ ಬಂದಿದ್ದವರಿಗೆ ಬಿರಿಯಾನಿ ಊಟ ಕೂಡ ಹಾಕಿಸಿದ್ದಾರೆ.

ಹೌದು.. ತುಮಕೂರು ಜಿಲ್ಲೆಯ ತುರವೇಕೆರೆ ಕ್ಷೇತ್ರ ಬಿಜೆಪಿ ಶಾಸಕ ಮಸಾಲೆ ಜಯರಾಂ ಅವರೇ ಹೀಗೆ ಲಾಕ್ ಡೌನ್ ಗೆ ಡೋಂಟ್ ಕೇರ್ ಅಂದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನರ ಗುಂಪಿನೊಂದಿಗೆ ಅದ್ದೂರಿಯಾಗಿ ಗುಬ್ಬಿ ತಾಲೂಕಿನ ಇಡಗೂರು ಗ್ರಾಮದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಹುಟ್ಟ ಹಬ್ಬವನ್ನು ಸರಳವಾಗಿ, ಸಾಮಾಜಿಕ ಅಂತರ ಕಾಯ್ದುಕೊಂಡು ಆಚರಿಸಿಕೊಂಡಿದ್ದರೇ ಸುದ್ದಿಯಾಗುತ್ತಿರಲಿಲ್ಲ. ತಮ್ಮ ಹುಟ್ಟು ಹಬ್ಬಕ್ಕೆ ನೆರಿದ್ದ ನೂರಾರು ಜನರೊಂದಿಗೆ ಶಾಲು, ಪೇಟ ಧರಿಸಿ ಕೇಕ್ ಕಟ್ ಮಾಡಿ, ಆಚರಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂದಿದ್ದ ತಮ್ಮ ಕಾರ್ಯಕರ್ತರಿಗೆ ಬಿರಿಯಾನಿ ಊಟವನ್ನು ಕೂಡ ಹಾಕಿಸಿದ್ದಾರೆ. ಹೀಗೆ ಬಿರಿಯಾನಿ ತಿನ್ನಲು ಜನರು ಮುಗಿ ಬಿದ್ದಿರುವ ಘಟನೆ ಕೂಡ ನಡೆಸಿದೆ.

ಏನ್ ಸ್ವಾಮಿ ಇದು..? ಜನಪ್ರತಿನಿಧಿಯಾಗಿ ಲಾಕ್ ಡೌನ್ ಸಂದರ್ಭದಲ್ಲಿ ಹೀಗೆ ಹುಟ್ಟ ಹಬ್ಬ ಆಚರಿಸಿಕೊಳ್ಳುವ ಅಗತ್ಯ ಇತ್ತಾ.? ಕೊರೊನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿರುವ ಈ ಹೊತ್ತಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ನೀವೇ ಹೀಗೆ ಮಾಡಿದ್ರೆ ಹೇಗೆ.? ಜನರಲ್ಲಿ ಜಾಗೃತಿ ಮೂಡಿಸಿ, ಕೊರೊನಾ ಓಡಿಸಬೇಕಾದ ಜನಪ್ರತನಿಧಿಗಳೇ ಹೀಗೆ ನಡೆದುಕೊಂಡ್ರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.