ಬೆಂಗಳೂರು: ರಾಜ್ಯ ಬಿಜೆಪಿ ಸರಕಾರ ನೀಡಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜಾಹೀರಾತಿನಲ್ಲಿ ದೇಶದ ಮೊದಲ ಪ್ರಧಾನಮಂತ್ರಿ ಜವಾಹರ ಲಾಲ್ ನೆಹರು ಅವರ ಭಾವಚಿತ್ರ ಕೈಬಿಟ್ಟಿರುವುದು ಸಣ್ಣತನದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಮಟ್ಟದ ಜೆಡಿಎಸ್ ಕಾರ್ಯಾಗಾರದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ನೆಹರು ಅವರ ಕೊಡುಗೆ ಸಾಕಷ್ಟಿದೆ. ಅವರು ಮೊದಲ ಪ್ರಧಾನಮಂತ್ರಿ. ಆದರೆ ಅವರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣನೆ ಮಾಡಿರುವಂತಿದೆ. ನೆಹರು ಅವರು ಯಾವುದೇ ಪಕ್ಷಕ್ಕೇ ಸೇರಿರಲಿ, ಆದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಕುಟುಂಬದ ಕೊಡುಗೆ ದೊಡ್ಡದಿದೆ. ಅಂತವರ ಭಾವಚಿತ್ರವನ್ನು ಜಾಹೀರಾತಿನಲ್ಲಿ ಕೈಬಿಟ್ಟಿರುವುದು ಸಣ್ಣತನದ ರಾಜಕಾರಣ ಎಂದು ಮಾಜಿ ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಕ್ಲಿಷ್ಟಕರ ಪರಿಸ್ಥಿತಿ ಇತ್ತು. ಆದರೂ ದೇಶ ಮುಂದಕ್ಕೆ ತೆಗೆದುಕೊಂಡು ಹೋದರು ನೆಹರು ಅವರು. ಅವರ ಚಿತ್ರಕ್ಕೆ ಕೊಕ್ಕೆ ಹಾಕಿದ ಇವರು ದೇಶಪ್ರೇಮಿಗಳಲ್ಲ. ದೇಶಪ್ರೇಮದ ಹೆಸರಿನಲ್ಲಿ ದೇಶವನ್ನು ಛಿದ್ರ ಛಿದ್ರ ಮಾಡುತ್ತಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟ ಈ ದೇಶ. ಎಲ್ಲಾ ಕುಟುಂಬಗಳು ಹೀಗೆ ಬದುಕಬೇಕಿದೆ. ಆದರೆ ಈಗ ಏನಾಗಿದೆ ಎಂದು ಅವರು ಪ್ರಶ್ನಿಸಿದರು.

ನೆಹರು ಅವರಿಂದ ದೇಶ ವಿಭಜನೆ ಆಯಿತು, ಹಾಗಾಗಿ ಬಿಜೆಪಿ ಇಂದು ಕರಾಳ ದಿನ ಆಚರಣೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ನೆಹರು ತಪ್ಪು ಮಾಡಿದ್ದರೆ ಆಗ ವೀರ ಸಾವರ್ಕರ್ ಟೀಂ ಇತ್ತಲ್ಲಾ, ಅವರ ವಿರುದ್ಧ ಆಂದೋಲನ ಮಾಡಬೇಕಿತ್ತು. ಏನು ಮಾಡುತ್ತಿದ್ದರು ಅವರು? ವಿಭಜನೆ ಆದಾಗ ಲಕ್ಷಾಂತರ ಕುಟುಂಬಗಳು ಅಂದು ಸಾವು ನೋವು ಕಂಡಿವೆ. ಅನೇಕ ಕುಟುಂಬದ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಮತ್ತೊಮ್ಮೆ ಇಂಥ ಕೃತ್ಯಗಳಿಗೆ ಅವಕಾಶ ಕೊಡಬೇಕು ಅನ್ನೋದು ಇವರ ಉದ್ದೇಶವೇ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಬಿಜೆಪಿಯವರನ್ನು ಪ್ರಶ್ನಿಸಿದರು.

ಸಾವರ್ಕರ್ ಮತ್ತು ಟಿಪ್ಪು ಫ್ಲೆಕ್ಸ್ ಹರಿದ ತಕ್ಷಣ ದೇಶದ ಸಮಸ್ಯೆಗಳು ಬಗೆಹರಿಯಲ್ಲ. ಇರುವ ಸಮಸ್ಯೆಗಳು ಇನ್ನೂ ಹೆಚ್ಚಾಗುತ್ತವೆ. ಸರ್ವ ಜನಾಂಗದ ಶಾಂತಿಯ ತೋಟವಾದ ರಾಜ್ಯವನ್ನು ಹಾಳು ಮಾಡುವ ದುರುದ್ದೇಶ ಅಷ್ಟೇ ಇದರ ಹಿಂದೆ ಅಡಗಿದೆ ಎಂದು ಅವರು ಹೇಳಿದರು.

ರಾಷ್ಟ್ರ ಧ್ವಜದ ಹೆಸರಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ರಾಜಕೀಯ ಮಾಡುತ್ತಿವೆ

ರಾಷ್ಟ್ರಧ್ವಜದ ಹೆಸರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದ ಮಾಜಿ ಮುಖ್ಯಮಂತ್ರಿ ಮುಖ್ಯಮಂತ್ರಿಗಳು, ಕಳೆದ ಎಂಟತ್ತು ದಿನಗಳಿಂದ ಎರಡು ರಾಷ್ಟ್ರೀಯ ಪಕ್ಷದಲ್ಲಿ ಅಮೃತ ಮಹೋತ್ಸವದ ಹಬ್ಬದ ಆಚರಣೆ ಆಗುತ್ತಿದೆ. ಧ್ವಜ ಇಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ ಎಂದು ಅವರು ಟೀಕಿಸಿದರು.

ಬಿಜೆಪಿ ಮನೆಗಳ ಮೇಲೆ ಧ್ವಜ ಹಾರಿಸಿ ಎನ್ನುತ್ತಿದ್ದರೆ, ಕಾಂಗ್ರೆಸ್ ಪಕ್ಷ ತಿರಂಗ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಪೈಪೋಟಿಯಲ್ಲಿ ತಿರಂಗ ಯಾತ್ರೆ ಮಾಡುತ್ತಿದ್ದಾರೆ. ಈ ರೀತಿಯ ಪೈಪೋಟಿ ಏನಿದೆ ಎಂದು ಅವರು ಕುಟುಕಿದರು.

ರಾಷ್ಟ್ರಧ್ವಜವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಜನರ ಮುಂದೆ ಇಡುವ ಅಹವಾಲು ಏನಿದೆ? ಅಗ್ಗದ ಪ್ರಚಾರಕ್ಕಾಗಿ ಹೀಗೆ ಮಾಡಲಾಗುತ್ತಿದೆ. ಕಾಂಗ್ರೆಸ್ ನಲ್ಲಿ ಸಿದ್ದರಾಮೋತ್ಸವಕ್ಕೆ ಟಕ್ಕರ್ ಕೊಡಲು ಪಾದಯಾತ್ರೆ ಅಂತ ಅವರೇ ಹೇಳಿಕೊಂಡಿದ್ದಾರೆ. ರಾಷ್ಟ್ರಧ್ವಜದ ಗೌರವ ಹೆಚ್ಚಿಸಲು ಅಲ್ಲ. ನಾಳೆ ಮತ್ತೊಂದು ಟೀಂ ಪಾದಯಾತ್ರೆ ಮಾಡ್ತಾ ಇದೆ ಎಂದು ಅವರು ಟೀಕಿಸಿದರು.

ಎರಡು ರಾಷ್ಟ್ರೀಯ ಪಕ್ಷಗಳಿಗೆ ಅವರ ಹೃದಯದಲ್ಲಿ ಧ್ವಜದ ಬಗ್ಗೆ ಕಿಂಚಿತ್ತಾದರೂ ಗೌರವಭಾವನೆ ಇದ್ದರೆ ದೇಶದಲ್ಲಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು. ಒಂದು ಕಡೆ ಇವರು ಧ್ವಜದ ಬಗ್ಗೆ ಪೈಪೋಟಿ ಮಾಡ್ತಾ ಇದ್ದಾರೆ. ಇನ್ನೊಂದೆಡೆ ಸಂವಿಧಾನವನ್ನೇ ಬುಡಮೇಲು ಮಾಡುವ ಕೆಲಸ ಆಗುತ್ತಿದೆ. ಸಾಂವಿಧಾನಿಕ ಸಂಸ್ಥೆಗಳು ನಿರ್ಭಿತಿಯಿಂದ ಕೆಲಸ ಮಾಡಲು ಆಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಬಡತನ ಎಷ್ಟಿದೆ ದೇಶದಲ್ಲಿ, ಎರಡು ತುತ್ತಿನ ಅನ್ನಕ್ಕೂ ಪರಿತಪಿಸುತ್ತಿದ್ದಾರೆ. ಒಂದೊಂದು ಯೋಜನೆಯಲ್ಲೂ ದೇಶದ ಹಣ ಲೂಟಿ ಎಷ್ಟಾಗುತ್ತಿದೆ ಎಂಬುದನ್ನು ನೋಡುತ್ತಿದ್ದೇನೆ. ಭ್ರಷ್ಟ ವ್ಯವಸ್ಥೆ ಬಗ್ಗೆ ನಿತ್ಯ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ಸ್ವಾತಂತ್ರ ಹಬ್ಬದ ಆಚರಣೆ ಇದ್ದರೆ ವರ್ಷಕ್ಕೆ 17 ಲಕ್ಷ ಕುಟುಂಬಗಳಲ್ಲಿ ಜನಿಸಿದ ಮಕ್ಕಳು ಅಪೌಷಿಕತೆಯಿಂದ ಸಾಯುತ್ತಿವೆ. ರಾಜ್ಯದಲ್ಲಿ ನೋಡಿದರೆ ಮಕ್ಕಳ ಪೌಷ್ಟಿಕ ಆಹಾರದಲ್ಲೂ ಲೂಟಿ ಆಗುತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಆರೋಗ್ಯ ಶಿಕ್ಷಣ, ರೈತರ ಬದುಕಿಗೆ ಏನು ಮಹತ್ವ ಕೊಡಬೇಕೋ ಅದು ಆಗುತ್ತಿಲ್ಲ. ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಎರಡು ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಅವರಲ್ಲಿ ಸರುಕು ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಂದೆ ಏನು ಯೋಜನೆ ಅಂತ ಮುಂದಾಲೋಚನೆ ಇಲ್ಲ.‌ಜನರಿಗೆ ವಂಚನೆಯ ಕೆಲಸ ಮಾಡ್ತಾ ಇದ್ದಾರೆ. ಇದನ್ನು ಮೊದಲು ನಿಲ್ಲಿಸಬೇಕು. ಜನರ ಅಭಿವೃದ್ಧಿ ಗೆ ಪೈಪೋಟಿ ಮಾಡಬೇಕು. ಎಷ್ಟೋ ಜನರಿಗೆ ಮನೆ ಇಲ್ಲ. ಅನೇಕರು ಫ್ಲೈ ಓವರ್ ಕೆಳಗೆ ಮಲಗುತ್ತಿದ್ದಾರೆ. ಅವರಿಗೆ ಮನೆ ಇಲ್ಲ. ಇನ್ನೆಲ್ಲಿ ಅವರು ರಾಷ್ಟ್ರಧ್ವಜ ಹಾರಿಸ್ತಾರೆ. ಮೊದಲು ಅವರಿಗೆ ಬದುಕು ಕೊಡಿ ಎಂದರು ಮಾಜಿ ಮುಖ್ಯಮಂತ್ರಿಗಳು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಜುನಾಥ್ ಅವರು ಹಾಜರಿದ್ದರು.

Share.
Exit mobile version