ಕಲಬುರಗಿ : ಪ್ರಸಕ್ತ 2022ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆಯು (ಟಿ.ಇ.ಟಿ) ಇದೇ ನವೆಂಬರ್ 6 ರಂದು ಕಲಬುರಗಿ ನಗರದ 62 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಯಲ್ಲಿ ನಕಲು ಮಾಡುವುದು ಕಂಡುಬಂದಲ್ಲಿ ಅಂತ ಅಭ್ಯರ್ಥಿಗಳನ್ನು ಸ್ಥಳದಲ್ಲಿಯೇ ಡಿಬಾರ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಟಿ.ಇ.ಟಿ. ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ನಕಲು ಮಾಡುವಲ್ಲಿ ಶಿಕ್ಷಕರು, ಇತರೆ ಸಿಬ್ಬಂದಿಗಳು ಸಹಕಾರ ನೀಡಿದಲ್ಲಿ ಅವರ ವಿರುದ್ಧವು ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ನವೆಂಬರ್ 6 ರಂದು ಭಾನುವಾರ ನಗರದ 46 ಕೇಂದ್ರಗಳಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಗೆ ಅಧಿವೇಶನ-1 ಪತ್ರಿಕೆ ಮತ್ತು 62 ಕೇಂದ್ರಗಳಲ್ಲಿ ಮಧ್ಯಾಹ್ನ 2 ರಿಂದ ಸಾಯಂಕಾಲ 4.30 ಗಂಟೆ ವರೆಗೆ ನಡೆಯುವ ಅಧಿವೇಶನ-2 ಪತ್ರಿಕೆಯಲ್ಲಿ ಒಟ್ಟಾರೆ 16,984 ಜನ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಡಿ.ಸಿ ಅವರು ತಿಳಿಸಿದರು.

ಪರೀಕ್ಷೆ ಸೂತ್ರವಾಗಿ ಮತ್ತು ಪಾರದರ್ಶಕವಾಗಿ ನಡೆಯಲು 62 ಪರೀಕ್ಷಾ ಕೇಂದ್ರಗಳಿಗೆ ತಲಾ ಓರ್ವರಂತೆ ಅಧೀಕ್ಷಕರನ್ನು, ಸ್ಥಾನಿಕ ಜಾಗೃತದಳವನ್ನು ನೇಮಿಸಲಾಗಿದೆ. ಪ್ರಶ್ನೆ ಪತ್ರಿಕೆ ಸಾಗಿಸಲು 18 ಜನ ರೂಟ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳಿರುವ ಕುರಿತು ಕೇಂದ್ರದ ಮುಖ್ಯಸ್ಥರು ಖಾತ್ರಿಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಿ.ಸಿ.ಟಿ.ವಿ. ಕಣ್ಗಾವಲಿನಲ್ಲಿ ಪರೀಕ್ಷೆ: ಟಿ.ಇ.ಟಿ. ಪರೀಕ್ಷೆಯನ್ನು ಸಂಪೂರ್ಣವಾಗಿ ಸಿ.ಸಿ.ಟಿ.ವಿ. ಕಣ್ಗಾವಲಿನಲ್ಲಿ ನಡೆಯಲಿದೆ. ಜೊತೆಗೆ ಇಲಾಖೆಯಿಂದ ಪರೀಕ್ಷೆ ಪತ್ರಿಕೆ ತೆರೆಯುವುದರಿಂದ ಹಿಡಿದು ಪರೀಕ್ಷೆ ಮುಕ್ತಾಯದ ನಂತರ ಬಂಡಲ್ ಪ್ಯಾಕ್ ಮಾಡುವವರೆಗೆ ಸಂಪೂರ್ಣ ವಿಡಿಯೋಗ್ರಾಫಿ ಮಾಡಲಾಗುತ್ತದೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ಮಾಹಿತಿ ನೀಡಿದರು.

ಮೊಬೈಲ್ ನಿಷೇಧ: ಪರೀಕ್ಷಾ ಕೊಠಡಿಗೆ ಯಾವುದೇ ಕಾರಣಕ್ಕು ಮೊಬೈಲ್, ಪುಸ್ತಕ ಹಾಳೆ, ಲಾಗ್ ಟೇಬಲ್, ಕ್ಯಾಲ್ಕುಲೇಟರ್, ಎಲೆಕ್ಟ್ರಾನಿಕ್ ಉಪಕರಣ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಆದರೆ ಜಾಮಿಟ್ರಿ ಪರಿಕರಗಳನ್ನು ಮಾತ್ರ ತರಲು ಅವಕಾಶ ನೀಡಲಾಗಿದೆ.

Share.
Exit mobile version