ಬೆಂಗಳೂರು : ರಾಜ್ಯದಲ್ಲಿ ಶೀತ ಮಾರುತಗಳು ಬೀಸುವ ಬಹಳಷ್ಟು ಸಾಧ್ಯತೆ ಇದ್ದು, ರಾಜ್ಯದಲ್ಲಿ ಇನ್ನೂ ಎರಡು ದಿನ ಚಳಿ ಪ್ರಮಾಣ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮುಂದಿನ 24 ಗಂಟೆಗಳ ಅವಧಿಯಲ್ಲಿ ಕನಿಷ್ಟ ಉಷ್ಣಾಂಶವು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಸೆಲ್ಷಿಯಸ್ ಕಡಿಮೆ ಹಾಗೂ ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಸೆಲ್ಷಿಯಸ್, ಕಡಿಮೆಯಾಗುವ ಸಾಧ್ಯತೆಗಳಿರುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ.
ಮುಂದಿನ 24 ಗಂಟೆಗಳ ಕಾಲ ರಾಜ್ಯದ ಮೂರು ಜಿಲ್ಲೆಗಳಲ್ಲಿ ತೀವ್ರ ಶೀತಗಾಳಿ ಬೀಸಲಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉತ್ತರ ಭಾರತದಲ್ಲಿ ಬೀಸುತ್ತಿರುವಂತ ಶೀತಗಾಳಿಯ ಪರಿಣಾಮದಿಂದಾಗಿ ರಾಜ್ಯದ ಉತ್ತರ ಕರ್ನಾಟಕ ಜಿಲ್ಲೆಗಳಾದಂತ ವಿಜಯಪುರ, ಬಾಗಲಕೋಟೆ ಹಾಗೂ ಬೀದರ್ ಜಿಲ್ಲೆಯಲ್ಲಿ ತೀವ್ರ ಶೀತಗಾಳಿ ಬೀಸಲಿದೆ ಎಂದು ತಿಳಿಸಿದೆ.
ಶನಿವಾರ ಬಾಗಲಕೋಟೆಯಲ್ಲಿ 9.4 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಚಿಂತಾಮಣಿ, ಬಳ್ಳಾರಿ 10.1, ವಿಜಯಪುರ 10, ಬೀದರ್ 10.4, ಚಾಮರಾಜನಗರ 11.9, ಮೈಸೂರು 11.4, ಮಂಗಳೂರು 20.5, ಬೆಂಗಳೂರು 14.7, ದಾವಣಗೆರೆ 12.8, ಹಾವೇರಿ 14.8, ಧಾರವಾಡ 12.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.