ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ತಮ್ಮನ್ನು ಖಾಯಂಗೊಳಿಸುವಂತೆ ರಾಜ್ಯ ಆರೋಗ್ಯ ಇಲಾಖೆಯ ( Karnataka Health Department ) ಎನ್ ಹೆಚ್ ಎಂ ನೌಕರರು ( NHM Worker ) ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಣಿಪುರ ಹೊರತುಪಡಿಸಿ, ಬೇರೆ ಯಾವುದೇ ರಾಜ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವಂತ ನೌಕರರನ್ನು ಖಾಯಂ ಮಾಡಿಲ್ಲ ಎಂಬುದಾಗಿ ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ. ಅಲ್ಲದೇ ಮುಷ್ಕರ ನಿರತ ನೌಕರರು 48 ಗಂಟೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಟಿಪ್ಪಣಿ ಹೊರಡಿಸಿದ್ದು, ದೇಶದ ಹಲವಾರು ರಾಜ್ಯಗಳಲ್ಲಿ ಈಗಾಗಲೇ ಎನ್ ಹೆಚ್ ಎಂ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಲಾಗಿದೆ. ಖಾಯಂ ಮಾಡುವ ಕುರಿತು ಪರಿಶೀಲನಾ ಹಂತದಲ್ಲಿರುತ್ತದೆ ಎಂದು ಎನ್ ಹೆಚ್ ಎಂ ಒಳಗುತ್ತಿಗೆ ನೌಕರರ ಸಂಘದವರು ಆರೋಗ್ಯ ಸಚಿವರಿಗೆ ತಮ್ಮನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದಿದೆ.
ಇದಕ್ಕೆ ಮಾಹಿತಿ ನೀಡಿರುವಂತ ಆರೋಗ್ಯ ಇಲಾಖೆಯು ಮಣಿಪುರ ರಾಜ್ಯವನ್ನು ಹೊರತುಪಡಿಸಿ, ಒಡಿಸ್ಸಾ, ಪಂಜಾಪ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ರಾಜಸ್ಥಾನ ಇತರೆ ರಾಜ್ಯಗಳ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ರಾಜ್ಯಗಳಲ್ಲಿ ಎನ್ ಹೆಚ್ ಎಂ ಒಳಗುತ್ತಿಗೆ ನೌಕರರನ್ನು ಯಾವ ರಾಜ್ಯದಲ್ಲಿಯೂ ಸಹ ಖಾಯಂಗೊಳಿಸಿರುವುದು ಕಂಡುಬಂದಿಲ್ಲ. ಅಲ್ಲಿನ ಅಭಿಯಾನ ನಿರ್ದೇಶಕರು ಮತ್ತು ಇತರ ಅಧಿಕಾರಿಗಳ ಹತ್ತಿರ ಪರಿಶೀಲಿನೆ ಮಾಡಲಾಗಿದೆ ಎಂದು ತಿಳಿಸಿದೆ.
ಆರೋಗ್ಯ ಇಲಾಖೆಯು ತುರ್ತು ಸೇವೆ ಒದಗಿಸುವ ಇಲಾಖೆಯಾಗಿದೆ. ಇಲ್ಲಿನ ನೌಕರರು ಪ್ರತಿಭಟನೆ ನಡೆಸುತ್ತಿರುವುದರಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಧಕ್ಕೆಯುಂಟಾಗಿರುತ್ತದೆ. ದಿನಾಂಕ 16-03-2023ರಂದು ನೀಡಿದ ಸೂಚನೆಯನ್ನು ಸಹ ಧಿಕ್ಕರಿಸಿ ಪ್ರತಿಭಟನೆಯನ್ನು ಮುಂದುವರೆಸುತ್ತಿದ್ದು, ಈ ರೀತಿಯ ವರ್ತನೆಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿ, ESMA ACT ಅನ್ನು ಜಾರಿಗೊಳಿಸಿ ಕ್ರಮ ಕೈಗೊಂಡು ಕರ್ತವ್ಯಕ್ಕೆ ಹಾಜರಾಗದ ಪ್ರತಿಭಟನಾ ನಿರತರ ಮೇಲೆ ಕಾನೂನಾತ್ಮಕ ಕಠಿಣ ಕ್ರಮ ಜಾರಿಗೊಳಿಸಲು ನಿರ್ಧರಿಸಿರೋದಾಗಿ ಆರೋಗ್ಯ ಇಲಾಖೆ ಎಚ್ಚರಿಸಿದೆ.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಸಂಭಾವನೆಯನ್ನು ದಿನಾಂಕ 01-04-2023ರಿಂದ ಜಾರಿಗೆ ಬರುವಂತೆ ಶೇ.15ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂಬುದಾಗಿ ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ