ವಿಜಯನಗರ : ಮೇಲ್ವರ್ಗಕ್ಕೆ ಶೇ. 10 ಮೀಸಲಾತಿ ನೀಡಬೇಕೆಂಬ ನಿಯಮವೇ ಇಲ್ಲ. ಈ ರೀತಿ ನಿಯಮ ಇದ್ದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಜಯನಗರ ಜಿಲ್ಲೆಯ ಮೈಲಾರ ಗ್ರಾಮದಲ್ಇ ಕಾಗಿನೆಲೆ ಮಹಾ ಸಂಸ್ಥಾಪನ ಪೀಠದಿಂದ ನಿರ್ಮಾಣಗೊಂಡ ಗಂಗಮಾಳಮ್ಮದೇವಿ ಯಾತ್ರಾ ನಿವಾಸವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಒಂದೇ ದಿನದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಬಿಲ್ ಪಾಸ್ ಮಾಡಿಕೊಂಡು ಮೇಲ್ಜಾತಿಯಲ್ಲಿನ ಬಡವರಿಗೆ 10% ಮೀಸಲಾತಿ ಜಾರಿ ಮಾಡಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬಹುದು ಎಂದು ಸಂವಿಧಾನ ಹೇಳಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಎಸ್,ಸಿ ಮೀಸಲಾತಿಯನ್ನು 15 ರಿಂದ 17 ಮತ್ತು ಎಸ್,ಟಿ ಮೀಸಲಾತಿಯನ್ನು 3 ರಿಂದ 7% ಗೆ ಏರಿಕೆ ಮಾಡಿದ್ದಾರೆ, ಆದರೆ ಇದಕ್ಕೆ ಸಂವಿಧಾನ ತಿದ್ದುಪಡಿಯನ್ನೇ ಮಾಡಿಲ್ಲ. ನಾನು ಮೂಗಿಗೆ ತುಪ್ಪ ಹಚ್ಚುವವರನ್ನು ನೋಡಿದ್ದೆ, ಹಣೆಗೆ ತುಪ್ಪ ಹಚ್ಚುವವರನ್ನು ನೋಡಿದ್ದು ಇದೇ ಮೊದಲು. ಮೇಲ್ಜಾತಿಯ ಬಡವರಿಗೆ 10% ಮೀಸಲಾತಿ ನೀಡಿದ್ದನ್ನು ಯಾರಾದರೂ ವಿರೋಧ ಮಾಡಿದ್ದು ನೀವು ನೋಡಿದ್ದೀರಾ? ನಾನು ಮಾತ್ರ ಇದನ್ನು ಹಲವು ಬಾರಿ ಪ್ರಶ್ನೆ ಮಾಡಿದ್ದೇನೆ. ಸಂವಿಧಾನದ 15 ಮತ್ತು 16ನೇ ವಿಧಿಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬಹುದು ಎಂದು ಹೇಳಿದೆ ಆದರೂ ಹೇಗೆ ಸಂವಿಧಾನಬಾಹಿರವಾಗಿ ಮೀಸಲಾತಿ ನೀಡಿದ್ರು? ಈ ಬಗ್ಗೆ ಹಿಂದುಳಿದ ಜಾತಿಗಳ ಸ್ವಾಮೀಜಿಗಳು ಧ್ವನಿಯೆತ್ತಬೇಕು ಎಂದರು.
ನಮ್ಮ ದೇಶದಲ್ಲಿ ಇನ್ನೂ ಜಾತಿ ವ್ಯವಸ್ಥೆ ಹೋಗಿಲ್ಲ. ಯಾವ ಜಾತಿಯೂ ಶ್ರೇಷ್ಠ, ಕನಿಷ್ಠ ಎಂದು ನಾವು ಮಾಡಿದ್ದಲ್ಲ, ಮನವಾದಿಗಳು ಮಾಡಿದ್ದು. ಅವಕಾಶ ಸಿಕ್ಕಿದ್ದರೆ ಎಲ್ಲರೂ ಶ್ರೇಷ್ಠ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುತ್ತಿದ್ದರು. ವಿವೇಕಾನಂದರು ಹಿಂದುತ್ವ ಬೇರೆ, ಹಿಂದೂ ಧರ್ಮ ಬೇರೆ ಎಂದು ಹೇಳಿದ್ದಾರೆ. ಹಿಂದುತ್ವ ಎಂದರೆ ಮನುವಾದಿ ಧರ್ಮ. ಮನುವಾದಿಗಳು ಮತ್ತು ಪುರೋಹಿತಶಾಹಿಗಳು ನಮ್ಮ ಸಮಾಜಕ್ಕೆ ಶಾಪ ಎಂದು ಹೇಳಿದ್ದರು. ಇಂದು ವಿವೇಕಾನಂದರ ಜನ್ಮದಿನವನ್ನು ಯುವಜನೋತ್ಸವ ಎಂದು ಆಚರಣೆ ಮಾಡುತ್ತೇವೆ, ಅವರನ್ನು ಪೂಜಿಸುತ್ತೇವೆ ಆದರೆ ಅವರ ಮಾತುಗಳನ್ನು ಮುಚ್ಚಿಹಾಕಲು ನೋಡುತ್ತೇವೆ ಎಂದು ತಿಳಿಸಿದ್ದಾರೆ.