ಬೆಂಗಳೂರು: ವಾಹನಗಳ ಮೇಲೆ ಬಿಬಿಎಂಪಿ ( BBMP ) ಎಂದು ನಾಮಫಲಕ ( Name Board ) ಅಳವಡಿಸುವುದನ್ನು ನಿಷೇಧಿಸಿ, ಬಿಬಿಎಂಪಿ ಆದೇಶಿಸಿದೆ. ಈ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ನೌಕರರು ತಮ್ಮ ವಾಹನಗಳ ಮೇಲೆ ಅಳವಡಿಸುತ್ತಿದ್ದಂತ ನಾಮಫಲಕ ನಿಷೇಧಿಸಿ ಆದೇಶಿಸಿದೆ.

ಈ ಸಂಬಂಧ ಬಿಬಿಎಂಪಿಯ ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ ಘನತ್ಯಾಜ್ಯ ವಿಭಾಗ ಹಾಗೂ ಯೋಜನಾ ವಿಭಾಗದ ವಿಶೇಷ ಆಯುಕ್ತರು ರವರು ಸುತ್ತೋಲೆ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆ, ಸಾಗಾಣೆ ಮತ್ತು ವಿಲೇವಾರಿಯಲ್ಲಿ ಗುತ್ತಿಗೆದಾರರ ಕಾರ್ಯನಿರ್ವಹಿಸುತ್ತಿರುವ ವಾಹನಗಳ ಮೇಲೆ ಗುತ್ತಿಗೆದಾರರು ‘ಪಾಲಿಕೆಯ ಮೂಲಕ ಸೇವೆಯಲ್ಲಿ/ ಬಿಬಿಎಂಪಿ/ಬಿಬಿಎಂಪಿ ಸೇವೆಯಲ್ಲಿ/ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ ಎಂದು ನಮೂದಿಸಿಕೊಂಡು/ ನಾಮಫಲಕಗಳನ್ನು ಅನಧಿಕೃತವಾಗಿ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಗಮನಿಸಲಾಗಿರುತ್ತದೆ ಎಂದಿದ್ದಾರೆ.

ಮುಂದುವರಿದು, ಪಾಲಿಕೆ ವತಿಯಿಂದ ಕಾರ್ಯನಿರ್ವಹಿಸುವ ಕಾಮಗಾರಿಗಳಿಗೆ ಅವಶ್ಯವಿರುವ ನಿರ್ಮಾಣ ಸಾಮಗ್ರಿಗಳ ಸಾಗಾಣೆ ಮಾಡುವ ವಾಹನಗಳ‌ ಮೇಲೆ ಪಾಲಿಕೆಯ ಸೇವೆಯಲ್ಲಿ ಎಂದು ನಮೂದಿಸಿಕೊಂಡು/ನಾಮಫಲಕಗಳನ್ನು ಅನಧಿಕೃತವಾಗಿ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಗಮನಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಇದರಿಂದ ವಾಹನಗಳ ಅಪಘಾತಗಳಾದಾಗ ಬಿಬಿಎಂಪಿಯ ವಾಹನದಿಂದ ಅಪಘಾತವಾಗುತ್ತಿದೆ ಎಂದು ದಿನಪತ್ರಿಕೆಗಳಲ್ಲಿ/ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದರಿಂದ ಪಾಲಿಕೆಯ ಕುರಿತು ತಪ್ಪು ಪರಿಕಲ್ಪನೆ ಮೂಡುತ್ತಿರುತ್ತದೆ. ಅದ್ದರಿಂದ ಮುಂದಿನ ದಿನಗಳಲ್ಲಿ ವಾಹನಗಳ‌ ಮೇಲೆ ಅನಧಿಕೃತವಾಗಿ ಪಾಲಿಕೆಯ ಹೆಸರನ್ನು ನಮೂದಿಸುವುದು/ನಾಮಫಲಕಗಳನ್ನು ಹಾಕುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ‌ ಎಂದು ತಿಳಿಸಿದ್ದಾರೆ.

Share.
Exit mobile version