ಕಲಬುರಗಿ : ಕಲ್ಯಾಣ ಕರ್ನಾಟಕದ ಜನತೆಗೆ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಖಾಲಿ ಇರುವ 15 ಸಾವಿರ ಹುದ್ದೆಗಳನ್ನು ಮುಂದಿನ ವರ್ಷದ ಮಾರ್ಚ್ 31 ರೊಳಗೆ ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಅಮೃತಮಹೋತ್ಸವದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ವಿವಿಧ 15,000 ಖಾಲಿ ಹುದ್ದೆಗಳನ್ನು ಮುಂದಿನ ಮಾರ್ಚ್‍ನೊಳಗೆ ಭರ್ತಿ ಮಾಡುವುದಾಗಿ ತಿಳಿಸಿದ ಅವರು, ಈ ಪೈಕಿ 5 ಸಾವಿರ ಶಿಕ್ಷಕರನ್ನೂ ಮಾರ್ಚ್‍ನಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 2,100 ಶಾಲಾ ಕೊಠಡಿಗಳು ಮತ್ತು 2,500 ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಮತ್ತು ಕನಸನ್ನು ನನಸಾಗಿಸಲು ಬದ್ಧವಾಗಿದೆ ಎಂದರು. ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸೂಚನೆಗಳನ್ನು ನೀಡಲಾಗಿದೆ. ಈ ಪ್ರದೇಶದಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು 68 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಹದಿನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.

ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ದೀರ್ಘಕಾಲೀನ ಯೋಜನೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ ಎಂದು ಸಿಎಂ ಹೇಳಿದರು. ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಹಾಲಿ ಸರ್ಕಾರ ಇದೇ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಂಪೂರ್ಣ ಅನುದಾನ ಬಿಡುಗಡೆ ಮಾಡಿದೆ. ಈ ಹಿಂದೆ ಭರವಸೆ ನೀಡಿದಂತೆ ರಾಜ್ಯ ಬಜೆಟ್ ನಲ್ಲಿ 3000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.

Share.
Exit mobile version