ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ (ಪಿಎಸ್ಐ) ಹುದ್ದೆಗಳ ನೇಮಕಾತಿಗಾಗಿ ಜ.23ರಂದು ನಡೆಸಿದ್ದ ಮರುಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಪತ್ರಿಕೆ-1 ಮತ್ತು 2ರಲ್ಲಿ ಗಳಿಸಿರುವ ಅಂಕಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಒಟ್ಟು 545 ಹುದ್ದೆಗಳ ನೇಮಕಕ್ಕೆ ಕೆಇಎ ಮರು ಪರೀಕ್ಷೆ ನಡೆಸಿತ್ತು. ಅಭ್ಯರ್ಥಿಗಳು ಪಡೆದ ಅಂಕಗಳ ಮಾಹಿತಿಯನ್ನು ಸದ್ಯದಲ್ಲೇ ಗೃಹ ಇಲಾಖೆಗೆ ಸಲ್ಲಿಸಲಾಗುತ್ತದೆ. ಅದರ ನಂತರ ರೋಸ್ಟರ್ ಆಧಾರದ ಮೇಲೆ‌ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು.

ಸಿಇಟಿ: ಅರ್ಜಿ ಸಲ್ಲಿಕೆಗೆ ಮತ್ತೊಂದು ಅವಕಾಶ

ಏ.18 ಮತ್ತು 19ರಂದು ನಡೆಸಲು ಉದ್ದೇಶಿಸಿರುವ ಸಿಇಟಿ ಪರೀಕ್ಷೆಗೆ ಆನ್ಲೈನ್ ಅರ್ಜಿ ಸಲ್ಲಿಸಲು ಮಾರ್ಚ್ 30ರ ಬೆಳಿಗ್ಗೆ 11 ಗಂಟೆಯಿಂದ ಏ.1ರ ಸಂಜೆ 4 ಗಂಟೆಯವರೆಗೆ ಮತ್ತೊಂದು ಅವಕಾಶ ಕೊಡಲಾಗಿದೆ. ಅರ್ಜಿ ಸಲ್ಲಿಸುವವರು ಏ.1ರ ರಾತ್ರಿ 8 ಗಂಟೆಯವರೆಗೂ ಶುಲ್ಕ ಪಾವತಿಸಬಹುದು. ಈ ಅವಕಾಶವನ್ನು ಬಳಸಿಕೊಳ್ಳುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು. ಈ ವಿಷಯದಲ್ಲಿ ಯಾವುದೇ ತಕರಾರುಗಳಿಗೆ ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೆಸೆಟ್ ಪರೀಕ್ಷೆ: ಪರಿಷ್ಕೃತ ಕೀ ಉತ್ತರಗಳು ಪ್ರಕಟ

ಜ.23ರಂದು 42 ನಾನಾ ವಿಷಯಗಳಿಗೆ ನಡೆಸಲಾಗಿದ್ದ ಕೆಸೆಟ್ ಪರೀಕ್ಷೆಯ ಪೈಕಿ ಆಕ್ಷೇಪಣೆಗಳು ಕಂಡುಬಂದಿದ್ದ 23 ವಿಷಯಗಳಲ್ಲಿ ಮನಃಶಾಸ್ತ್ರವನ್ನು ಹೊರತುಪಡಿಸಿ, ಮಿಕ್ಕ 22 ವಿಷಯಗಳ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ ಎಂದು ರಮ್ಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪದವಿ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಇದು ಅರ್ಹತಾ ಪರೀಕ್ಷೆ ಆಗಿದ್ದು ಆಭ್ಯರ್ಥಿಗಳ ಆಕ್ಷೇಪಣೆಗಳನ್ನು ಆಧರಿಸಿ, ಪರಿಷ್ಕೃತ ಕೀ ಉತ್ತರಗಳನ್ನು ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

Share.
Exit mobile version