ತುಮಕೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರವಾನಗಿ ಭೂಮಾಪಕರ (Licensed Surveyors) ಸೇವೆಯನ್ನು ಕಾಯಂ ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.
ತುಮಕೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ಈಗಾಗಲೇ ಭೂಮಾಪಕರ ಗಮನಕ್ಕೆ ತರಲಾಗಿದೆ. ಕಳೆದ ವಾರ ಅವರೊಂದಿಗೆ ನಡೆಸಿದ ಮಾತುಕತೆಯ ಸಂದರ್ಭದಲ್ಲಿಯೇ ಸೇವೆ ಕಾಯಂ ಮಾಡಲು ಸಾಧ್ಯವಿಲ್ಲ ಎಂಬ ವಿಷಯವನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಪರವಾನಗಿ ಭೂಮಾಪಕರು ಕಳೆದ ಮೂರು ತಿಂಗಳಿಂದ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಕಂದಾಯ ಇಲಾಖೆಯ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. “ಭೂಮಾಪಕರ ಇತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸದಾ ಸಿದ್ಧವಿದೆ. ಈ ನಿಟ್ಟಿನಲ್ಲಿ ಅವರನ್ನು ಸಮಾಧಾನಪಡಿಸುವ ಮತ್ತು ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಸಚಿವರು ಹೇಳಿದರು.
ಸೇವೆಯನ್ನು ಕಾಯಂಗೊಳಿಸಬೇಕು ಅಥವಾ ನಿಗದಿತ ವೇತನ ನೀಡಬೇಕು ಎಂಬುದು ಭೂಮಾಪಕರ ಪ್ರಮುಖ ಒತ್ತಾಯವಾಗಿದೆ. ಆದರೆ, ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಪ್ರಸ್ತುತ ಪರವಾನಗಿ ಭೂಮಾಪಕರಿಗೆ ಅವರ ಕೆಲಸಕ್ಕೆ ತಕ್ಕಷ್ಟು ಗೌರವಧನ ಮತ್ತು ಆದಾಯ ಸಿಗುತ್ತಿದೆ. ಉತ್ತಮವಾಗಿ ಕೆಲಸ ಮಾಡುವವರಿಗೆ ಒಳ್ಳೆಯ ಸಂಭಾವನೆ ದೊರೆಯುತ್ತಿದ್ದು, ಅವರ ಆದಾಯಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ವಿವರಿಸಿದರು.








