ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಆಗ್ರಹಿಸಿ ರಾಜ್ಯಾಧ್ಯಂತ ಇಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆಯ ಮೂಲಕ ರಣಕಹಳೆ ಮೊಳಗಿಸಲಿದೆ.

ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರವೇಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಅಲ್ಲದೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಇಂದು ಏಕಕಾಲಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂಕ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಅವರು, ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಕನ್ನಡ ಉದ್ಯೋಗ ಮೀಸಲಾತಿ ಕಲ್ಪಿಸುವಂತ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆಯನ್ನು ನಾಳೆ ನಡೆಸಲಾಗುತ್ತಿದೆ. ಇತರೆ ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಖಾಸಗಿ ವಲಯದಲ್ಲೂ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗುತ್ತಿದೆ ಎಂದರು.

ಕನ್ನಡಿಗರಿಗೆ ಕರ್ನಾಟಕದಲ್ಲಿ ಆಗುತ್ತಿರುವಂತ ಅನ್ಯಾಯ ತಪ್ಪಬೇಕು. ಕರ್ನಾಟಕದಲ್ಲಿ ಖಾಸಗಿ ವಲಯದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಶೇ.100ರಷ್ಟು ಕನ್ನಡಿಗರಿಗೇ ಮೀಸಲಿರಿಸಬೇಕು ಅಂತ ಆಗ್ರಹಿಸಿ ನಾಳೆ ರಾಜ್ಯಾಧ್ಯಂತ ಕರವೇಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Share.
Exit mobile version