ಬೆಂಗಳೂರು : ಸರ್ಕಾರಿ ಶಾಲೆ ವಿಲೀನದ ಬಗ್ಗೆ ವಾಟ್ಸಾಪ್‌ ಸ್ಟೇಟಸ್‌ ಹಾಕಿದ್ದ ವೀರಣ್ಣ ತಿಮ್ಮಪ್ಪ ಮಡಿವಾಳ ಅನ್ನೋ ಸಹ ಶಿಕ್ಷಕನಿಗೆ ಶಿಕ್ಷಣ ಇಲಾಖೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದು, ನೋಟಿಸ್‌ ಜಾರಿ ಮಾಡಿದೆ. ಸಧ್ಯ ಶಿಕ್ಷಣ ಇಲಾಖೆಯ ಈ ಕ್ರಮ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ.

ಅಂದ್ಹಾಗೆ, ಶಿಕ್ಷಣ ಇಲಾಖೆ ನೀಡಿದ ನೋಟೀಸ್‌ನಲ್ಲಿ “ನಿಡಗುಂದ ಸರ್ಕಾರಿ ಶಾಲೆಯ ಶಿಕ್ಷಕ ವೀರಣ್ಣ ತಿಮ್ಮಪ್ಪ ಮಡಿವಾಳ ಕನ್ನಡ ಪ್ರಭಾ ಪತ್ರಿಕೆಯಲ್ಲಿ 13800 ಸರ್ಕಾರಿ ಶಾಲೆ ವಿಲೀನ? ಎಂಬ ತಲೆಬರಹದ ಅಡಿಯಲ್ಲಿ ಮಂತ್ರಿಗಳು ನೀಡಿರುವ ಹೇಳಿಕೆಗೆ ನೀವು “13800 ಶಾಲೆ ವಿಲೀನ ಅಲ್ಲ.. ಅಷ್ಟು ಶಾಲೆಗಳ ಹತ್ಯಾಕಾಂಡ.. ಸರಕಾರಿ ಶಾಲಾ ಮಕ್ಕಳ ಭವಿಷ್ಯದ ಮಾರಣಹೋಮ” ಎಂದು ಸರ್ಕಾರದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ನಿಮ್ಮ ಅಭಿಪ್ರಾಯವನ್ನ ಸಾಮಾಜಿಕ ಅಂತರ್ಜಾಲದಲ್ಲಿ ಹರಿಬಿಟ್ಟಿದ್ದು, ಇದು ಕರ್ನಾಟಕ ನಾಗಾರಿಕ ಸೇವಾ ಅಭಿಪ್ರಾಯವನ್ನ ನಿಯಮಗಳು, 1957ಕ್ಕೆ ವ್ಯತಿರಿಕ್ತವಾಗಿದೆ. ಅಲ್ಲದೇ ನಡತೆ ನಿಯಮಗಳು 1966ರ ನಿಯಮ 3ರನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದ್ದು, ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲೆ ಶಿಸ್ತು ಕ್ರಮ ಏಕೆ ಜರುಗಿಸಬಾರದು?” ಎಂದಿದೆ.

ಇನ್ನು ನೋಟೀಸ್‌ ಮುಟ್ಟಿದ ಮೂರು 3 ದಿನಗಳೊಳಗಾಗಿ ನಿಮ್ಮ ಸ್ಪಷ್ಟವಾದ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಸಧ್ಯ ಶಿಕ್ಷಣ ಇಲಾಖೆಯ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗ್ತಿದ್ದು, ಸರ್ಕಾರ ಸರ್ವಾಧಿಕಾರಿ ವರ್ತನೆ ಖಂಡನೀಯ ಎಂದು ದೂರುತ್ತಿದ್ದಾರೆ. ಇನ್ನು ಹಲವು ಬಳಕೆದಾರರು ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎನ್ನುತ್ತಿದ್ದಾರೆ.

 

Share.
Exit mobile version