ಬೆಂಗಳೂರು : ಬೆಂಗಳೂರಿನ ಮೆಟ್ರೋದಲ್ಲಿ ಆಗಾಗ ಕೆಲವು ಘಟನೆಗಳು ಪ್ರಯಾಣಿಕರಿಗೆ ಮುಜುಗರ ಉಂಟು ಮಾಡುತ್ತಿರುತ್ತವೆ. ಇದೀಗ ಮೆಟ್ರೋದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಯುವ ಜೋಡಿಗಳು ತಬ್ಬಿಕೊಂಡು ಮುದ್ದಾಡಿರುವ ಘಟನೆ ನಡೆದಿದೆ.ಈ ದೃಶ್ಯವನ್ನು ಮೆಟ್ರೋದ ಸಹ ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ಮೆಟ್ರೋ ಕೂಡ, ದೆಹಲಿ ಮೆಟ್ರೋದಂತೆ ಅಸಹ್ಯಕರ ಘಟನೆಗಳಿಗೆ ಸಾಕ್ಷಿ ಆಗುತ್ತಿದೆಯೇ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಯುವ ಜೋಡಿಯೊಂದು ಮೆಟ್ರೋ ರೈಲಿನಲ್ಲಿ ನಿಂತುಕೊಂಡಾಗ ಪರಸ್ಪರ ತಬ್ಬಿಕೊಂಡು ನಿಂತಿದ್ದಾರೆ. ಇದನ್ನು ನೋಡಿದ ಕೆಲವರು, ಚಿಕ್ಕ ಮಕ್ಕಳು ನೋಡಿದರೆ ಇದನ್ನು ಅನುಕರಿಸುವುದಿಲ್ಲವೇ ಎಂದು ಅಸಹ್ಯದಿಂದ ಬೇಸರಿಸಿಕೊಂಡಿದ್ದಾರೆ. ಸಾರ್ವಜನಿಕ ಸಾರಿಗೆಯಾದ ಮೆಟ್ರೋದಲ್ಲಿ ತಬ್ಬಿಕೊಂಡು ನಿಂತರೂ ಯಾರೂ ಪ್ರಶ್ನೆ ಮಾಡದ ಹಿನ್ನೆಲೆಯಲ್ಲಿ ಯುವ ಜೋಡಿ ತಮ್ಮ ಆಪ್ತತೆಯನ್ನು ಮತ್ತಷ್ಟು ಮುಂದುವರೆಸಿದೆ. ಈ ವೇಳೆ ಮೈಮರೆತು ಇಬ್ಬರೂ ಪರಸ್ಪರ ಚುಂಬಿಸಿಕೊಂಡಿದ್ದಾರೆ.

ಈ ಕುರಿತಂತೆ ಟ್ವಿಟರ್‌ನಲ್ಲಿ ಸ್ಯಾಮ್‌ ಎನ್ನುವ ವ್ಯಕ್ತಿಯೊಬ್ಬರು ಕೆಪಿಎಸ್‌ಬಿ52 ಎಂಬ ಹೆಸರಿನ ಖಾತೆಯಿಂದ ವಿಡಿಯೋ ಪೋಸ್ಟ್ ಹಂಚಿಕೊಂಡಿದ್ದು,ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (@officialBMRCL), ನಮ್ಮ ಮೆಟ್ರೋ (@NammaMetro_), ಮತ್ತು ಬೆಂಗಳೂರು ಸಿಟಿ ಪೊಲೀಸ್ (@BlrCityPolice) ಗೆ ಟ್ಯಾಗ್ ಮಾಡಿದ್ದಾರೆ. ನಮ್ಮ ಮೆಟ್ರೋದಲ್ಲಿ ಏನಾಗುತ್ತಿದೆ? ಬೆಂಗಳೂರು ಮೆಟ್ರೋ ನಿಧಾನವಾಗಿ ದೆಹಲಿ ಮೆಟ್ರೋ ಆಗಿ ಬದಲಾಗುತ್ತಿದೆ. ಅವರ ಮೇಲೆ ಸ್ವಲ್ಪ ಕ್ರಮ ಕೈಗೊಳ್ಳಿ. ಹುಡುಗಿ ಅಕ್ಷರಶಃ ಹುಡುಗನನ್ನು ಚುಂಬಿಸುತ್ತಿದ್ದಳು ಎಂದು ಬರೆದುಕೊಂಡಿದ್ದಾರೆ.

Share.
Exit mobile version