ಬೆಂಗಳೂರು : ಬೆಂಗಳೂರು ರೇಸ್​ ಕೋರ್ಸ್ನಲ್ಲಿ ಅನಧಿಕೃತವಾಗಿ ಕುದುರೆ ಬೆಟ್ಟಿಂಗ್ ಆಯೋಜಿಸಿ ಬೆಟ್ಟಿಂಗ್‌ದಾರರಿಂದ ಕೋಟ್ಯಂತರ ಹಣ ಸಂಗ್ರಹಿಸಿದ ಆರೋಪದ ಮೇಲೆ‌ 26 ಮಂದಿ ಬುಕ್ಕಿಗಳು ಮತ್ತವರ ಕಂಪನಿಗಳ ವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಅನಧಿಕೃತವಾಗಿ ಬೆಟ್ಟಿಂಗ್‌ ಆಯೋಜಿಸಿ ಕೋಟ್ಯಂತರ ರು. ಅವ್ಯವಹಾರ ನಡೆಸಿರುವ ಬಗ್ಗೆ ತನಿಖೆ ಸಂದರ್ಭದಲ್ಲಿ ಬಹಿರಂಗವಾಗಿದೆ. ಇದು ಅತ್ಯಂತ ಗಂಭೀರ ಸ್ವರೂಪದ ಪ್ರಕರಣವಾಗಿದೆ. ಜಿಎಸ್​ಟಿ ಮತ್ತು ಟಿಡಿಎಸ್​ ಮೊತ್ತ ಪಾವತಿಗೆ ಸಂಗ್ರಹಿಸಿರುವ ಕೊಟ್ಯಂತರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಆದ್ದರಿಂದ ಎಫ್‌ಐಆರ್‌ ರದ್ದುಪಡಿಸಲಾಗದು ಎಂದು ಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣ ಸಂಬಂಧ ಪೊಲೀಸರು ದಾಖಲಿಸಿರುವ ಎಫ್ಐಆರ್ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಸೂರ್ಯ ಅಂಡ್​ ಕೋ ಸೇರಿದಂತೆ ಬೆಂಗಳೂರು ಟರ್ಫ್ ಕ್ಲಬ್‌ ಆವರಣದಲ್ಲಿ ಅಕ್ರಮ ಬೆಟ್ಟಿಂಗ್​ ನಡೆಸುತ್ತಿದ್ದರು ಎನ್ನಲಾದ 26 ವಿವಿಧ ಎಂಟರ್ ಪ್ರೈಸಸ್ ಕಂಪೆನಿಗಳು, ಅವುಗಳ ಮಾಲೀಕರು (ಬುಕ್ಕಿಗಳು) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ವಿಶ್ವಜಿತ್​ ಶೆಟ್ಟಿ ಅವರ ಪೀಠ ಆದೇಶಿಸಿದೆ.

Share.
Exit mobile version