ಬಳ್ಳಾರಿ: ” ಪ್ರೀತಿ ಕುರುಡು ” ಎಂಬ ಮಾತಿನಂತೆ ಬೆಲ್ಜಿಯಂ ಕನ್ಯೆ, ವಿಶ್ವವಿಖ್ಯಾತ ಹಂಪಿಯ ಯುವಕ ಜೊತೆ ಹಿಂದೂ ಸಂಪ್ರಾದಾಯದಂತೆ ಸಪ್ತಪದಿ ತುಳಿಯುವ ಮೂಲಕ ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ.
ಹೌದು, ಹಂಪಿಯ ನಿವಾಸಿ ಅನಂತರಾಜು ಹಾಗೂ ಬೆಲ್ಜಿಯಂ ದೇಶದ ಕೆಮಿಲ್ ಇಬ್ಬರು ಪರಸ್ಪರ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಸಪ್ತಪದಿ ತುಳಿದಿದ್ದಾರೆ. ಬುಧವಾರ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಈ ಜೋಡಿ, ಇಂದು ಮುಂಜಾನೆ 8:30 ರಿಂದ 9:30ರ ಕುಂಭ ಶುಭ ಮುಹೂರ್ತದಲ್ಲಿ ಹಂಪಿಯ ವಿರೂಪಾಕ್ಷೇಶ್ವರನ ಸನ್ನಧಿಯಲ್ಲಿ ಉಭಯ ಕುಟುಂಬಸ್ಥರ ಸಮಕ್ಷಮದಲ್ಲಿ ಪ್ರೇಮಿಗಳು ಮದುವೆಯಾಗಿದ್ದಾರೆ.
ಅನಂತರಾಜು ಆಟೋ ಚಾಲಕ ಹಾಗೂ ಹಂಪಿ ಮಾರ್ಗದರ್ಶಿಯಾಗಿ ವಿಜಯನಗರದ ಗತವೈಭವವನ್ನು ಪ್ರವಾಸಿಗರಿಗೆ ವಿವರಿಸುತ್ತಾರೆ. ಕೆಮಿಲ್ ಬೆಲ್ಜಿಯಂನಲ್ಲಿ ಸೋಷಿಯಲ್ ವರ್ಕರ್ ಆಗಿದ್ದಾರೆ. ಕಳೆದ ನಾಲ್ಕೈದು ವರ್ಷದ ಹಿಂದೆ ಜೀಪ್ ಫಿಲಿಪ್ಪೆ ಕುಟುಂಬ ಸಮೇತ ಹಂಪಿ ಗತವೈಭವ ಅರಿಯಲು ಬಂದಿದ್ದರು.
ಜೀಪ್ ಫಿಲಿಪ್ಪೆ ಪರಿವಾರಕ್ಕೆ ಹಂಪಿಯಲ್ಲಿ ಆಟೋ ಚಾಲಕ ಅನಂತರಾಜುವಿನ ಪರಿಚಯ ಆಗುತ್ತದೆ. ಅನಂತರಾಜು ಪ್ರಾಮಾಣಿಕ ಆಟೋ ಚಾಲಕ ಎನ್ನುವುದರೊಂದಿಗೆ ಉತ್ತಮ ಮಾರ್ಗದರ್ಶಕರಾಗಿಯೂ ಅವರ ಮನಗೆದ್ದಿದ್ದಾನೆ. ಜೀಪ್ ಫಿಲಿಪ್ಪೆ ಅವರ ತೃತೀಯ ಸುಪುತ್ರಿ ಕೆಮಿಲ್ ಹಂಪಿಯ ನಿಸರ್ಗದ ಸೊಬಗಿಗೆ ಮನಸೋತಿದ್ದಾರೆ.
ದಿನ ಕಳೆದಂತೆ ಕೆಮಿಲ್ ಅವರ ಪರಿವಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಾರ್ಗದರ್ಶಕ ಅನಂತರಾಜುವಿನ ಮೇಲೆ ಯುವತಿ ಕೆಮಿಲ್ಗೆ ಪ್ರೇಮ ಅರಳಿದೆ. ಈ ಮಧ್ಯೆ ಇಬ್ಬರೂ ಬೇರೆ ಬೇರೆ ದೇಶದಲ್ಲಿದ್ದರೂ ಪ್ರೀತಿ ಮಾತ್ರ ಕಡಿಮೆ ಆಗಿರಲಿಲ್ಲ. ಇದೀಗ ಇಂದು ಮದುವೆ ಆಗಿ ಎಲ್ಲರ ಗಮನ ಸೆಳೆದಿದ್ದಾರೆ.
ಮೂರು ವರ್ಷದ ಹಿಂದೆಯೇ ಪ್ರೇಮ ವಿವಾಹವಾಗಬೇಕಿದ್ದ ಜೋಡಿಗೆ ಕೊರೊನಾ ಮಹಾಮಾರಿ ತಡೆಯೊಡ್ಡಿತ್ತು. ಕೆಮಿಲ್ ಕುಟುಂಬದವರಿಗೆ ಮಗಳ ವಿವಾಹವನ್ನು ಬೆಲ್ಜಿಯಂ ದೇಶದಲ್ಲಿ ಅದ್ದೂರಿ ವೈಭವದೊಂದಿಗೆ ಮಾಡಬೇಕೆಂಬ ಮನಸ್ಸಿದ್ದರೂ, ಹಿಂದೂ ಸಂಪ್ರದಾಯದಂತೆ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳಬೇಕೆಂಬ ಯುವಕನ ಆಸೆಗೆ ಸಹಮತ ಸೂಚಿಸಿ, ಕೆಮಿಲ್ ಕುಟುಂಬಸ್ಥರು 50ಕ್ಕೂ ಅಧಿಕ ಜನ ಬೆಲ್ಜಿಯಂ ದೇಶದಿಂದ ಆಗಮಿಸಿ ಅಳಿಯ ಅನಂತರಾಜು, ಪುತ್ರಿ ಕೆಮಿಲ್ಗೆ ಆಶೀರ್ವದಿಸಿದ್ದಾರೆ.
ಒಟ್ಟಾರೆ ಹಣೆ ಬರಹ ಕೂಡಿ ಬಂದರೆ ಹಡೆದ ತಾಯಿಗೂ ಕೇಳಬೇಕಿಲ್ಲ ಎಂಬ ಹಾಗೇ, ವಿದೇಶದಿಂದ ಬಂದು ಹಂಪಿಯ ಯುವಕನಿಗೆ ಮಗಳ ಇಚ್ಚೆಯಂತೆ ಕೆಮಿಲ್ಳನ್ನು ಪೋಷಕರು ಧಾರೆ ಎರೆದು ಕೊಟ್ಟಿದ್ದಾರೆ. ಪ್ರೇಮಿಗಳ ಮದುವೆಗೆ ಆಗಮಿಸಿದ್ದ ನೂರಾರು ಜನ ಗ್ರಾಮಸ್ಥರು ಅಕ್ಷತೆ ಹಾಕಿ ನವ ಜೋಡಿಗೆ ಹರಸಿದ್ದಾರೆ. ವಿಶೇಷವೆಂದರೆ ಕೆಮಿಲ್ ಕುಟುಂಬಸ್ಥರು ಭಾರತೀಯ ಸಂಪ್ರದಾಯದಂತೆ ಸೀರೆ ಉಟ್ಟು, ಹಣೆಗೆ ಕುಂಕುಮ ಇಟ್ಟು, ಕೈಗೆ ಬಳೆ ತೊಟ್ಟು ಎಲ್ಲರ ಗಮನ ಸೆಳೆದರು.