ಬೆಂಗಳೂರು: ನಗರದಲ್ಲಿ ಪೂರ್ವ ಮುಂಗಾರು, ಮುಂಗಾರು ಮಳೆ ಆರ್ಭಟದ ನಂತ್ರ ಉಂಟಾಗಲಿರುವ, ಈಗಾಗಲೇ ಉಂಟಾಗಿರುವಂತ ಮಳೆ ಅವಾಂತರ, ಪ್ರವಾಹ ಪರಿಸ್ಥಿತಿಯನ್ನು ತಡೆಯಲು ಬಿಬಿಎಂಪಿಯಿಂದ ಮಹತ್ವದ ಕ್ರಮ ವಹಿಸಲಾಗಿದೆ. ಅದೇ ನಗರದ 124 ಕಡೆಗಳಲ್ಲಿ ಪ್ರವಾಹವನ್ನು ನಿಭಾಯಿಸಲು ಸೆನ್ಸಾರ್ ಗಳನ್ನು ಅಳವಡಿಕೆ ಮಾಡಲಾಗಿದೆ.

ಪ್ರವಾಹವನ್ನು ನಿಭಾಯಿಸಲು ಮತ್ತು ಪ್ರತಿಕ್ರಿಯಿಸಲು ತಂತ್ರಜ್ಞಾನದ ಬಳಕೆ:

ನಗರದಲ್ಲಿ ಸುರಿವ ಮಳೆಗೆ ಬಿಬಿಎಂಪಿಯು ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಮಳೆಗಾಲದಲ್ಲಿ ಸಂಭವಿಸುವ ಅವಾಂತರಗಳನ್ನು ತಪ್ಪಿಸಲು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ರಾಜಕಾಲುವೆ, ದ್ವಿತೀಯ ರಾಜಕಾಲುವೆ, ಚರಂಡಿಗಳಲ್ಲಿ ಹೂಳು ತೆಗೆಯುವ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಜೊತೆಗೆ ರಸ್ತೆ ಬದಿಯ ಶೋಲ್ಡರ್ ಡ್ರೈನ್ ಗಳ ಬಳಿ ಇರುವ ತ್ಯಾಜ್ಯವನ್ನು ತೆರವುಗೊಳಿಸಿ ರಸ್ತೆ ಮೇಲೆ ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಲಾಗಿದೆ.

ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ತೊಳುಚರಂಡಿಗಳನ್ನು ಸ್ವಚ್ಛಗೊಳಿಸುವುದು ಮತ್ತು ರಸ್ತೆ ಮೇಲೆ ಶೇಖರಣೆಯಾಗಿರುವ ಅನುಪಯುಕ್ತ ಕಟ್ಟಡ ತ್ಯಾಜ್ಯ (Debris)ಗಳ ತೆರೆವು ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ.

124 ಕಡೆ ಸೆನ್ಸಾರ್ ಗಳ ಅಳವಡಿಕೆ:

ಪಾಲಿಕೆ ವ್ಯಾಪ್ತಿಯಲ್ಲಿ ಪ್ರವಾಹವನ್ನು ನಿಭಾಯಿಸಲು ಮತ್ತು ಪ್ರತಿಕ್ರಿಯಿಸಲು ರಾಜಕಾಲುವೆಗಳಲ್ಲಿ ತಂತ್ರಜ್ಞಾನದ ಬಳಸಿಕೊಂಡು 124 ಕಡೆ ನೀರಿನ ಮಟ್ಟ ಅಳೆಯುವ ಸಂವೇದಕ(Water Level Sensor)ಗಳನ್ನು ಕೆ.ಎಸ್.ಎನ್.ಡಿ.ಎಂ.ಸಿ ವತಿಯಿಂದ ಅಳವಡಿಸಲಾಗಿದೆ.

ಪ್ರತಿಯೊಂದು ಸೆನ್ಸಾರ್ ಯಂತ್ರಕ್ಕೂ ಸೋಲಾರ್ ಅಳವಡಿಸಲಾಗಿದೆ. ಅದರಿಂದ ನಿತ್ಯ ಅಂತರ್ಜಾಲದ ಮೂಲಕ ಕೆಎಸ್‌ಎನ್‌ಡಿಎಂಸಿ ನಿಯಂತ್ರಣ ಕೊಠಡಿಗೆ ಕೂಡಲೆ ಮಾಹಿತಿ ತಿಳಿಯಲಿದೆ. ಅವರು ಪಾಲಿಕೆಯ ಇಂಟಿಗ್ರೇಟೆಡ್ ಕಮಾಂಡಿಂಗ್ ಕಂಟ್ರೋಲ್ ಸೆಂಟರ್(ICCC)ಗೆ ಮಾಹಿತಿ ರವಾನೆ ಮಾಡಲಿದ್ದಾರೆ.

ಸೆನ್ಸಾರ್ ಅಳವಡಿಸಿರುವ ಕಡೆ ರಾಜಕಾಲುವೆಯಲ್ಲಿ ಹರಿಯುವ ನೀರಿನ ಮಟ್ಟವನ್ನು ಬಣ್ಣದ ಆಧಾರದಲ್ಲಿ ತಿಳಿಯಬಹುದಾಗಿದೆ. ಅದರಂತೆ ಹಸಿರು, ನೀಲಿ, ಕೆಂಪು ಹಾಗೂ ಕಪ್ಪು ಬಣ್ಣದಲ್ಲಿ ಗುರುತಿಸಲಾಗುತ್ತದೆ. ಹಸಿರು ಹಾಗೂ ನೀಲಿ ಬಣ್ಣವಿದ್ದರೆ ಯಾವುದೇ ಅಪಾಯವಿರುವುದಿಲ್ಲ. ಕೆಂಪು ಬಣ್ಣವಿದ್ದರೆ ಅಪಾಯ ಎಂದರ್ಥ ಹಾಗೂ ಕಪ್ಪು ಬಣ್ಣಕ್ಕೆ ತಿರುಗಿದರೆ ಪ್ರವಾಹ ಉಂಟಾಗಲಿದೆ ಎಂಬ ಮಾಹಿತಿ ತಿಳಿಯಲಿದೆ. ಆ ಮಾಹಿತಿಗನುಗುಣವಾಗಿ ಪ್ರವಾಹ ಉಂಟಾಗುವ ಸ್ಥಳದ ಸುತ್ತಮುತ್ತಲಿನ ನಿವಾಸಿಗಳನ್ನು ಬೇರೆಡೆ ತೆರಳುವಂತೆ ಸೂಚನೆ ನೀಡಬಹುದು. ಇದರಿಂದ ಪ್ರವಾಹದಿಂದಾಗುವ ಅನಾಗುತಗಳನ್ನು ತಪ್ಪಿಸಬಹುದಾಗಿದೆ.

860 ಕಿ.ಮೀ ಉದ್ದದ ರಾಜಕಾಲುವೆ:

ಬಿಬಿಎಂಪಿ ವ್ಯಾಪ್ತಿಯಲ್ಲಿ 860 ಕಿ.ಮೀ ಉದ್ದದ ರಾಜಕಾಲುವೆಯಿದ್ದು, ಈ ಪೈಕಿ 581 ಕಿ.ಮೀ ಉದ್ದ ರಾಜಕಾಲುವೆಯನ್ನು ಆರ್.ಸಿ.ಸಿ ತಡೆಗೋಡೆಯಿಂದ ನಿರ್ಮಾಣ ಮಾಡಲಾಗಿದೆ. 199 ಕಿ.ಮೀ ಉದ್ದ ರಾಜಕಾಲುವೆಯ ಆರ್.ಸಿ.ಸಿ ತಡೆಗೋಡೆ ಕಾಮಗಾರಿಯು ಪ್ರಗತಿಯಲ್ಲಿದೆ. ಇನ್ನುಳಿದ 80 ಕಿ.ಮೀ ರಾಜಕಾಲುವೆಯು ಕಚ್ಚಾ ಡ್ರೈನ್ ಒಳಗೊಂಡಿರುತ್ತದೆ.

ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯಕ್ಕೆ ಚುರುಕು:

ನಗರದಲ್ಲಿ ಪಕ್ಕಾ ಡ್ರೈನ್ 581 ಕಿ.ಮೀ ಉದ್ದದ ಆರ್.ಸಿ.ಸಿ ತಡೆಗೋಡೆ ನಿರ್ಮಿಸಿರುವ ರಾಜಕಾಲುವೆಯ ಭಾಗದಲ್ಲಿ ಹೂಳೆತ್ತುವ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ. ಅದಲ್ಲದೆ ತೆಗೆಯುವಂತಹ ಹೂಳನ್ನು ಕೂಡಲೆ ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ.

74 ಪ್ರವಾಹ ಪೀಡಿತ ಪ್ರದೇಶಗಳಲ್ಲಿ‌ ಶಾಶ್ವತ ಪರಿಹಾರಕ್ಕೆ ಕ್ರಮ:

ನಗರದಲ್ಲಿ 74 ಕಡೆ ಪ್ರವಾಹ ಪೀಡಿತ ಪ್ರದೇಶಗಳಿದ್ದು, ಸದರಿ ಸ್ಥಳಗಳಲ್ಲಿ ಶಾಶ್ವತ ಪರಿಹಾರಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಳೆಗಾಲದ ಹಿನ್ನೆಲೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಮುಸ್ಲಿಮರಿಗೆ ಉದ್ಯೋಗ ಮೀಸಲಾತಿ ನೀಡಲು ಕಾಂಗ್ರೆಸ್ ಪಿತೂರಿ: ಮೋದಿ

ಬೆಂಗಳೂರಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಕೇಸ್ : ವಾಟರ್ ಫಿಲ್ಟರ್ ರಿಪೇರಿಗೆ ಬಂದು ಮಹಿಳೆಯನ್ನು ತಬ್ಬಿ ದೌರ್ಜನ್ಯ

Share.
Exit mobile version