ಕೆಎನ್‌ಎನ್‌ಸಿನಿಮಾಡೆಸ್ಕ್‌: ಕನ್ನಡ ಪ್ರಧಾನ ಸಿನೆಮಾವೊಂದು ಪರ ಭಾಷೆಯಲ್ಲೂ ರಿಲೀಸ್ ಅಗ್ತಿದೆ ಅಂದ್ರೆ ಅದು ಖುಷಿಯ ಸಂಗತಿ. ಬನಾರಸ್ ಪಂಚ ಭಾಷೆಯಲ್ಲಿ ತಯಾರಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ ಅಂದ್ರೆ ಸಿನೆಮಾದ ಗುಣಮಟ್ಟ, ಕಥೆ, ನಿರೂಪಣೆ ಹಾಗೂ ಒಟ್ಟಾರೆ ಆ ಚಿತ್ರದ ಮೇಲಿನ ಭರವಸೆ, ನಿರೀಕ್ಷೆಗಳ ಮಟ್ಟ ಎಷ್ಟಿದೆ ಅನ್ನೋದನ್ನ ಹೇಳುತ್ತದೆ. ಇಷ್ಟೆಲ್ಲಾ ಪ್ರಭಾವ ಬೀರಿರುವ ಬನಾರಸ್ ಚಿತ್ರ ಈಗ ಬಿಡುಗಡೆಯ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಹೀಗಿರುವಾಗ ಈ ಚಿತ್ರದ ಪ್ರಚಾರ ಕಾರ್ಯವೂ ಅಷ್ಟೇ ವಿಶೇಷವಾಗಿರುತ್ತೆ ಅಂದ್ರೆ ತಪ್ಪಲ್ಲ. ಬನಾರಸ್ ಗೆ ಅದೂ ಸಹ ಬಲು ಸಲೀಸಾಗಿಯೇ ಒದಗಿ ಬಂದಂತಿದೆ. ಪ್ರತೀ ಹೆಜ್ಜೆಯೂ ಸುದ್ದಿಯಾಗ್ತಾ ದಾಖಲೆ ಬರೆಯುತ್ತಿರುವ ಬನಾರಸ್ ಜೋಡಿಗೆ ಮಣಿಕರ್ಣಿಕಾ ಫಿಲಂ ಫೆಸ್ಟಿವಲ್ನಲ್ಲಿ ಸನ್ಮಾನ ನಡೆಯುವ ಮೂಲಕ ಬನಾರಸ್ ಗೆ ಮತ್ತಷ್ಟು ಪ್ರಚಾರ ಸಿಕ್ಕಂತಾಗಿದೆ.

ಹೌದು ಸದ್ಯ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಒಂದಿನಿತೂ ಬಿಡುವಿಲ್ಲದೇ ರಾಜ್ಯ ರಾಜ್ಯ ಗಳನ್ನ ಸುತ್ತುವ ಮೂಲಕ ಬನಾರಸ್ ಜೋಡಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ವಾರಾಣಸಿಗೆ ಪ್ರಚಾರ ಕಾರ್ಯಕ್ಕೆಂದು ಬಂದಿಳಿದಿದ್ದಾಗ ಅವರುಗಳಿಗೆ ಅಪೂರ್ವ ಅವಕಾಶವೊಂದು ಒದಗಿ ಬಂದಿದೆ. ಅವರು ವಾರಾಣಸಿಯ ಪ್ರಪ್ರಥಮ ಮಣಿಕರ್ಣಿಕಾ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ವಾರಾಣಸಿಯಲ್ಲಿ ನಡೆಯುತ್ತಿರುವ ಮಣಿಕರ್ಣಿಕಾ ಫಿಲಂ ಫೆಸ್ಟಿವಲ್ನಲ್ಲಿ ಬನಾರಸ್ ಜೋಡಿಗೆ ಸನ್ಮಾನ ಭಾಗ್ಯ ಹಾಗು ಭಾಗಿಯಾಗುವ ಅವಕಾಶ ದೊರೆತದ್ದು ಬನಾರಸ್ ತಂಡವನ್ನ ಖುಷಿಯಾಗಿಸಿದೆ.

ಅದ್ರಲ್ಲೂ ಈ ಫಿಲ್ಮಂ ಫೆಸ್ಟಿವಲ್ ಕಾರ್ಯಕ್ರಮವನ್ನ ಬಾಲಿವುಡ್ನ ಹಿರಿಯ ನಟ ಸಂಜಯ್ ಮಿಶ್ರಾ ಅವರು ಉದ್ಘಾಟಿಸಿದ್ದು, ತದನಂತರ ಅವರೇ ಖುದ್ದಾಗಿ ಬನಾರಸ್ ಜೋಡಿಯನ್ನು ಸನ್ಮಾನಿಸಿ, ಚಿತ್ರದ ಕುರಿತು ಭರವಸೆಯ ಮಾತುಗಳನ್ನಾಡಿರೋದು ನವ ನಟ ಝೈದ್ ಗೆ ಹೊಸ ಹುರುಪು ನೀಡಿದೆ. ತಮ್ಮ ಚೊಚ್ಚಲ ಚಿತ್ರದ ರಿಲೀಸ್ ಗೂ ಮೊದಲೇ ಸಿಕ್ತಿರೋ ರೆಸ್ಪಾನ್ಸ್ಗೆ ಧನ್ಯತಾ ಭಾವ ತಾಳಿದ್ದಾರೆ. ವಾರಾಣಸಿಯ ವಾತಾವರಣವೇ ಬನಾರಸ್ ಚಿತ್ರದ ಜೀವಾಳವಾಗಿರುವಾಗ, ಗಂಗೆಯ ತಟದಲ್ಲೇ ಗರಿಬಿಚ್ಚುವ ಅಮೋಘ ಪ್ರೇಮಕಥಾನಕದ ಬನಾರಸ್ ಗೆ ಅದೇ ಜಾಗದಲ್ಲಿ ಸಿಕ್ಕ ಸನ್ಮಾನದ ನೆನಪುಗಳು ಒಂದು ದೊಡ್ಡ ಉಡುಗೊರೆಯಂತಾಗಿದೆ. ಈ ಹುರುಪಿನಲ್ಲಿ ಪ್ರಚಾರ ಕಾರ್ಯಕ್ಕೂ ಇನ್ನಷ್ಟು ವೇಗ ತುಂಬಿದ್ದಾರೆ ಝೈದ್. ಇನ್ನೇನಿದ್ದರೂ ನವೆಂಬರ್ 4 ರಂದು ಬನಾರಸ್ ಚಿತ್ರಮಧಿರಗಳಿಗೆ ಲಗ್ಗೆಯಿಡೋದೊಂದೇ ಬಾಕಿ ಉಳಿದಿದೆ.

Share.
Exit mobile version