ಸುಭಾಷಿತ :

Wednesday, January 29 , 2020 9:39 PM

ಥ್ರಿಲ್ಲಿಂಗ್ ಪಯಣದೊಂದಿಗೆ ಬೆರಗಾಗಿಸೋ ‘ಬಬ್ರೂ’! 3.5 /5


Saturday, December 7th, 2019 10:28 pm

ಸಿನಿಮಾ ಡೆಸ್ಕ್ :  ಒಂದು ಸುದೀರ್ಘ ಪಯಣದ ಜೊತೆ ಜೊತೆಗೆ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥೆ ಹೇಳುವ ಸಿನಿಮಾಗಳೆಂದರೇನೇ ಪ್ರೇಕ್ಷಕರ ಮನಸಲ್ಲಿ ಕಾತರದ ಕಥಕ್ಕಳಿ ಆರಂಭವಾಗುತ್ತದೆ. ಈ ಬದುಕೂ ಒಂದು ಪಯಣದಂತೆಯೇ ಇರೋದರಿಂದ ಪ್ರೇಕ್ಷಕರಿಗೆ ಜರ್ನಿ ಕಥೆಗಳ ಮೇಲೇ ತೀವ್ರವಾದ ಮೋಹ ಮೂಡಿಕೊಳ್ಳುವಂತಾಗಿದೆಯೇನೋ… ಅಂಥಾದ್ದೊಂದು ಮೋಹವೇ ಪ್ರೇಕ್ಷಕರ ಗಮನ ಬಬ್ರೂ ಚಿತ್ರದ ಸುತ್ತ ಗಿರಕಿ ಹೊಡೆಯುವಂತೆ ಮಾಡಿ ಬಿಟ್ಟಿತ್ತು. ಸಂಪೂರ್ಣವಾಗಿ ಅಮೆರಿಕಾದಲ್ಲಿಯೇ ಚಿತ್ರೀಕರಣ ನಡೆಸಿಕೊಂಡಿರೋ ಕಥೆ ಅನ್ನೋದರಿಂದ ಸಾಗಿ ಬಂದಿದ್ದ ಬಬ್ರೂವಿನ ಆಕರ್ಷಣೆಗಳ ಜರ್ನಿ ಬಿಡುಗಡೆಗೂ ಮುನ್ನವೇ ಹತ್ತು ಹಲವು ಆಕರ್ಷಣೆಗಳಾಗಿ ಪ್ರೇಕ್ಷಕರನ್ನು ತಾಕಿತ್ತು. ಅದೆಲ್ಲವೂ ಸಾರ್ಥಕ್ಯ ಕಾಣುವಂತೆ ಬಬ್ರೂ ಇದೀಗ ತೆರೆಕಂಡಿದೆ.

ಬಬ್ರೂ ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ನಿರ್ಮಾಣ ಮಾಡಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ. ಒಂದಷ್ಟು ಕಾಲದ ಬಳಿಕ ಮತ್ತೆ ನಿರ್ಮಾಪಕಿಯಾಗಿ ಮರಳಿರುವ ಸುಮನ್ ಇಲ್ಲಿ ಚೆಂದದ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಅವರದ್ದಿಲ್ಲಿ ಸಂಸಾರದ ಜಂಜಾಟಗಳಿಂದ ರೋಸತ್ತು ಸ್ವಾತಂತ್ರ್ಯ, ರಿಲೀಫ ಬಯಸಿ ಲಾಂಗ್ ಡ್ರೈವ್ ಹೊರಡೋ ಪಾತ್ರ. ಮಹಿ ಹಿರೇಮಠ್ ಅರ್ಜುನ ಎಂಬ ಪ್ರೇಮಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಗುರುತು ಪರಿಚಯವೇ ಇಲ್ಲದೆ ಇವರಿಬ್ಬರು ಅಮೆರಿಕಾದಿಂದ ಕೆನಡಾದತ್ತಾ ಬಬ್ರೂ ಕಾರಿನಲ್ಲಿ ಹೊರಡೋ ಪ್ರಯಾಣ, ಆ ಹಾದಿಯಲ್ಲಿ ಎದುರಾಗುವ ಚಿತ್ರವಿಚಿತ್ರ ತಿರುವುಗಳು ಮತ್ತು ಬೆಚ್ಚಿ ಬೀಳಿಸುವಂಥಾ ಘಟನಾವಳಿಗಳಿಂದ ತುಂಬಿಕೊಂಡಿರೋ ಬಬ್ರೂ ಒಂದೊಳ್ಳೇ ಸಸ್ಪೆನ್ಸ್ ಥ್ರಿಲ್ಲರ್ ಯಾನದ ಅನುಭೂತಿಯನ್ನು ಪ್ರತಿಯೊಬ್ಬರಿಗೂ ಕೊಡಮಾಡುವಂತೆ ಮೂಡಿ ಬಂದಿದೆ.

ಸನಾ ಮತ್ತು ಅರ್ಜುನ ಪರಿಚಯವೇ ಇಲ್ಲದಿದ್ದರೂ ಒಂದೇ ಕಾರಿರುವ ಕಾರಣಕ್ಕೆ ಅದರಲ್ಲಿಯೇ ಕೆನಡಾದತ್ತ ಯಾನ ಹೊರಡುತ್ತಾರೆ. ಆ ಹಾದಿಯಲ್ಲಿ ಅನಿರೀಕ್ಷಿತ ಘಟನಾವಳಿಗಳು ನಡೆದು ಮತ್ತೊಂದು ಪಾತ್ರವೂ ಕಾರಿನೊಳಗೆ ಸೇರಿಕೊಳ್ಳುತ್ತದೆ. ಎರಡಿದ್ದ ಜೀವಗಳ ಮೂರಾಗಿ ಒಂದೇ ಕಾರಿನಲ್ಲಿ ಪಯಣಿಸುತ್ತಿರಬೇಕಾದರೆ ಮತ್ತೋರ್ವ ಅದೇ ಕಾರನ್ನು ಹಿಂಬಾಲಿಸಿಕೊಂಡು ಬರುತ್ತಾನೆ. ಆತನದ್ದು ಕ್ರೌರ್ಯ ತುಂಬಿದ ವ್ಯಕ್ತಿತ್ವ. ಇದೆಲ್ಲವೂ ಸೇರಿಕೊಂಡು ಬಬ್ರೂ ಪಯಣವನ್ನು ರೋಚಕ ಹಾದಿಯಿಂದ ಆಚೀಚೆ ಕದಲದಂತೆ ಕೊಂಡೊಯ್ದಿದೆ.

ಸುಮನ್ ನಗರ್‍ಕರ್ ಪಾಲಿಗೆ ಈ ಸಿನಿಮಾ ಅದ್ದೂರಿ ರೀ ಎಂಟ್ರಿಗೆ ಹೇಳಿ ಮಾಡಿಸಿದಂತಿದೆ. ಅವರು ನಿರ್ವಹಿಸಿರುವ ಪಾತ್ರವೂ ಕೂಡಾ ಎಲ್ಲರಿಗೂ ಹಿಡಿಸುವಂತೆಯೇ ಮೂಡಿ ಬಂದಿದೆ. ಇನ್ನುಳಿದಂತೆ ಮಹಿ ಹಿರೇಮಠ್ ಕೂಡಾ ಚೆನ್ನಾಗಿಯೇ ನಟಿಸಿದ್ದಾರೆ. ಹೆಚ್ಚು ಕಾಲಾವಧಿಯದ್ದಲ್ಲದೇ ಇದ್ದರೂ ಗಾನಾ ಭಟ್ ಪಾತ್ರವೂ ನೆನಪಲ್ಲುಳಿಯುವಂತಿದೆ. ರೇ ಟೊಸ್ಟಾಡೋ ಸೇರಿದಂತೆ ವಿದೇಶಿ ನಟರೂ ಕೂಡಾ ತಂತಮ್ಮ ಪಾತ್ರಗಳಲ್ಲಿ ಚೆಂದಗೆ ನಟಿಸಿದ್ದಾರೆ. ಈ ಕಥೆಯನ್ನು ಎಲ್ಲಿಯೂ ರೋಚಕ ಛಾಯೆ ಮರೆಯಾಗದಂತೆ, ಕುತೂಹಲದ ಕೊಂಡಿಗಳು ಸಡಿಲವಾಗದಂತೆ ಕಟ್ಟಿ ಕೊಡುವಲ್ಲಿ ನಿರ್ದೇಶಕ ಸುಜಯ್ ರಾಮಯ್ಯ ಗೆದ್ದಿದ್ದಾರೆ. ಈ ಎಲ್ಲ ಕಾರಣಗಳಿಂದ ವಿಶಿಷ್ಟ ಶೈಲಿಯಲ್ಲಿ ಬಬ್ರೂ ಮೂಡಿ ಬಂದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions