ದಾವಣಗೆರೆ : ಸುಮಾರು 40 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಪಂಚಪೀಠಾಚಾರ್ಯರು ಒಂದಾಗುತ್ತಿದ್ದಾರೆ. ಜುಲೈ 21 ರಂದು ದಾವಣಗೆರೆಯಲ್ಲಿ ಪಂಚಪೀಠಗಳ ಸಮಾಗಮ ಆಗಲಿದ್ದು, ಜುಲೈ 21 ಮತ್ತು 22 ರಂದು ವೀರಶೈವ ಪೀಠಾಚಾರ್ಯರ ಶೃಂಗಸಭೆ ಆಯೋಜನೆ ಮಾಡಲಾಗಿದೆ. ಪಂಚಪೀಠದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಶೃಂಗ ಸಮ್ಮೇಳನ ನಡೆಯಲಿದ್ದು, ಪೀಠಾಚಾರ್ಯರು ಹಾಗೂ ಶಿವಾಚಾರ್ಯರನ್ನು ಒಂದೆಡೆ ಸೇರಿಸಿ ಜಾಗೃತಿ ಮೂಡಿಸಲಿದ್ದಾರೆ. ರಾಜ್ಯಾದ್ಯಂತ ಶೃಂಗ ಸಭೆ ಕುತೂಹಲ ಹೆಚ್ಚಿಸಿದೆ.
ಹೌದು 1967ರಲ್ಲಿ ಈ ಒಂದು ಪಂಚಪೀಠಗಳು ಮುಖ್ಯಮಂದಿರದಲ್ಲಿ ಸೇರಿದ್ದವು. ಇದೀಗ ದಾವಣಗೆರೆ ನಗರದ ರೇಣುಕಾ ಮಂದಿರದಲ್ಲಿ ಮತ್ತೆ ಪಂಚಪೀಠಾಚಾರ್ಯರು ಒಂದೇ ವೇದಿಕೆಯಲ್ಲಿ ಒಂದಾಗಲಿದ್ದಾರೆ. ಸಂಸ್ಕೃತಿ ಸಂವರ್ಧನೆಗಾಗಿ ಪಂಚಪೀಠಚಾರ್ಯರಿಂದ ಪಾದಯಾತ್ರೆ ಹಮ್ಮಿಕೊಳ್ಳಲಿದ್ದು, ರಂಭಾಪುರಿ ಪೀಠ, ಉಜ್ಜಯಿನಿ ಪೀಠ, ಕೇದಾರ ಪೀಠ, ಕಾಶಿಪೀಠ ಹಾಗೂ ಶ್ರೀಶೈಲ ಪೀಠ ಒಂದೇ ವೇದಿಕೆಯಲ್ಲಿ ಸಮಾಗಮವಾಗಲಿವೆ.
ಈ ಶೃಂಗಸಭೆಯಲ್ಲಿ ದೇಶದ 500ಕ್ಕೂ ಹೆಚ್ಚು ಮಠಾಧೀಶರು ಭಾಗಿ ಆಗಲಿದ್ದಾರೆ. ಸುಮಾರು 25000 ಈ ಒಂದು ಶೃಂಗಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ದಾವಣಗೆರೆಯಲ್ಲಿ ಊಟ, ವಾಸ್ತವ್ಯ ಮತ್ತು ಲಿಂಗ ಪೂಜೆಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುನ್ನುಡಿ ಬರೆಯಲು ವೀರಶೈವ ಲಿಂಗಾಯತ ಸಮುದಾಯ ಮುಂದಾಗಿದೆ. ಜಾತಿ ಸಮೀಕ್ಷೆ ವಿಚಾರದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಾತಿ ಗಣತಿ ವೇಳೆ ವೀರಶೈವ ಲಿಂಗಾಯತ ಎಂದು ಬರೆಸುವಂತೆ ಜಾಗೃತಿ ಮೂಡಿಸಲು ವೀರಶೈವ ಲಿಂಗಾಯತ ಮಹಾಸಭಾ ಮುಂದಾಗಿದೆ.