ನವದೆಹಲಿ:ವಿಶ್ವದ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಗಳಲ್ಲಿ ಒಂದಾದ ಒರಾಕಲ್, ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಐಐಟಿ ರೂರ್ಕಿ, ಐಐಟಿ ಹೈದರಾಬಾದ್, ಎನ್‌ಐಟಿ ವಾರಂಗಲ್ ಮತ್ತು ವಿಎನ್‌ಐಟಿ ನಾಗ್ಪುರದಂತಹ ಕ್ಯಾಂಪಸ್‌ಗಳಲ್ಲಿ ನೀಡಿದ್ದ ಉದ್ಯೋಗ ಆಫರ್ ಪತ್ರಗಳನ್ನು (Offer Letters) ಹಿಂಪಡೆದಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಪದವಿ ಮುಗಿಸಿ ಕೆಲಸಕ್ಕೆ ಸೇರಲು ಸಜ್ಜಾಗಿದ್ದ ನೂರಾರು ಯುವ ಇಂಜಿನಿಯರ್‌ಗಳ ಭವಿಷ್ಯ ಈಗ ಅತಂತ್ರವಾಗಿದೆ.
ಕಂಪನಿಯು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಕ್ಲೌಡ್ ಮೂಲಸೌಕರ್ಯಕ್ಕೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ನಡೆಸುತ್ತಿರುವ ‘ಆಂತರಿಕ ಪುನರ್ರಚನೆ’ಯ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ವಿಶೇಷವಾಗಿ ‘ಒರಾಕಲ್ ಹೆಲ್ತ್’ ಮತ್ತು ಅಪ್ಲಿಕೇಶನ್ ಇನ್ಫ್ರಾಸ್ಟ್ರಕ್ಚರ್ ವಿಭಾಗದ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿರುವುದು ಈ ಆಫರ್ ರದ್ದತಿಗೆ ಪ್ರಮುಖ ಕಾರಣ ಎನ್ನಲಾಗಿದೆ.
ಹೆಚ್ಚಿನ ಐಐಟಿ ಮತ್ತು ಎನ್‌ಐಟಿಗಳಲ್ಲಿ “ಒಬ್ಬ ವಿದ್ಯಾರ್ಥಿಗೆ ಒಂದು ಉದ್ಯೋಗ” (One Student, One Job) ಎಂಬ ನೀತಿ ಇದೆ. ಇದರಿಂದಾಗಿ ಒರಾಕಲ್‌ನಲ್ಲಿ ಕೆಲಸ ಸಿಕ್ಕಿದ್ದ ವಿದ್ಯಾರ್ಥಿಗಳು ಇತರ ಕಂಪನಿಗಳ ಸಂದರ್ಶನಕ್ಕೆ ಹಾಜರಾಗಿರಲಿಲ್ಲ. ಈಗ ಅಂತಿಮ ಕ್ಷಣದಲ್ಲಿ ಆಫರ್ ರದ್ದಾಗಿರುವುದರಿಂದ ಅವರು ಹೊಸದಾಗಿ ಕೆಲಸ ಹುಡುಕಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಒರಾಕಲ್ ಜಾಗತಿಕವಾಗಿ ನಡೆಸುತ್ತಿರುವ 30,000 ವಜಾಗಳಲ್ಲಿ ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಇಂಜಿನಿಯರ್‌ಗಳು, ಆರ್ಕಿಟೆಕ್ಟ್‌ಗಳು ಮತ್ತು ಪ್ರೋಗ್ರಾಂ ಮ್ಯಾನೇಜರ್‌ಗಳು ಈ ವಜಾ ಪಟ್ಟಿಯಲ್ಲಿದ್ದಾರೆ.
ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಸಂಬಳದ ಆಫರ್ ನೀಡುತ್ತಿದ್ದ ಒರಾಕಲ್‌ನಂತಹ ಕಂಪನಿಗಳ ಈ ನಡೆ, ಕ್ಯಾಂಪಸ್ ಪ್ಲೇಸ್‌ಮೆಂಟ್ ಪ್ರಕ್ರಿಯೆಯ ಮೇಲೆ ಭವಿಷ್ಯದಲ್ಲಿ ಗಂಭೀರ ಪರಿಣಾಮ ಬೀರುವ ಆತಂಕ ಮೂಡಿಸಿದೆ.








