ಜೂನ್ 2 ರಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ತಮ್ಮ ಕೋಚಿಂಗ್ ಸಂಸ್ಥೆಯಲ್ಲಿ ಗುಂಡಿನ ದಾಳಿಯನ್ನು ಪ್ರಚೋದಿಸಿದ್ದಾರೆ ಎಂಬ ಆರೋಪದ ಮೇಲೆ ದಾಖಲಾದ ಪ್ರಕರಣದಲ್ಲಿ, ಜನಪ್ರಿಯ ಶಿಕ್ಷಕ ಫೈಸಲ್ ಖಾನ್, ಅಲಿಯಾಸ್ ‘ಖಾನ್ ಸರ್’ ಅವರನ್ನು ಬಂಧಿಸದಂತೆ ಪಾಟ್ನಾ ಜಿಲ್ಲಾ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.
ಖಾನ್ ಗ್ಲೋಬಲ್ ಸ್ಟಡೀಸ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಖಾನ್ ಸರ್ ಅವರ ಹೆಸರು ಎಫ್‌ಐಆರ್ (FIR) ನಲ್ಲಿ ದಾಖಲಾಗಿದೆ ಎಂದು ಪಾಟ್ನಾ ಎಸ್‌ಎಸ್‌ಪಿ ಕಾರ್ತಿಕೇಯ ಶರ್ಮಾ ಶುಕ್ರವಾರ ತಿಳಿಸಿದ್ದರು. ಮಂಗಳವಾರ ರಾತ್ರಿ ಸುಮಾರು 15-20 ಜನರ ಗುಂಪು ಕೋಚಿಂಗ್ ಸೆಂಟರ್‌ನ ಪೋಸ್ಟರ್‌ಗಳನ್ನು ಹರಿದು ಹಾಕಿ, ಆವರಣದ ಮೇಲೆ ಕಲ್ಲು ತೂರಾಟ ನಡೆಸಿದಾಗ, ಸೆಂಟರ್‌ನ ಇಬ್ಬರು ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.
ಖಾನ್ ಸರ್ ಅವರ ಪರ ವಕೀಲರಾದ ಅರವಿಂದ್ ಕುಮಾರ್ ಮಹುವಾರ್, ತಮ್ಮ ಕಕ್ಷಿದಾರರನ್ನು ಅವಮಾನಿಸುವ ಉದ್ದೇಶದಿಂದ ಈ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
”ಖಾನ್ ಸರ್ ಅವರ ಸಿಬ್ಬಂದಿ ಮತ್ತೊಂದು ಕೋಚಿಂಗ್ ಸೆಂಟರ್‌ನ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಪ್ರತೀಕಾರವಾಗಿ, ಖಾನ್ ಸರ್ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ. ಅವರು ಶರಣಾಗುವುದಿಲ್ಲ ಮತ್ತು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ” ಎಂದು ವಕೀಲರು ತಿಳಿಸಿದ್ದಾರೆ.
ಅಲ್ಲದೆ, “ಘಟನೆಯ ವಿಡಿಯೋ ಮತ್ತು ಫೋಟೋಗಳನ್ನು ಗಮನಿಸಿದರೆ, ಭದ್ರತಾ ಸಿಬ್ಬಂದಿ ತಮ್ಮ ಸುರಕ್ಷತೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಖಾನ್ ಸರ್ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶದಿಂದಲೇ ಅವರ ಹೆಸರನ್ನು ಸೇರಿಸಲಾಗಿದೆ” ಎಂದು ವಕೀಲರು ವಾದಿಸಿದ್ದಾರೆ.
ಜೂನ್ 2 ರಂದು ಸಂಸ್ಥೆಯ ಹೊರಗೆ ಗುಂಡು ಹಾರಿಸಲಾಗಿದ್ದು, ಇದರಲ್ಲಿ ಒಬ್ಬ ಭದ್ರತಾ ಸಿಬ್ಬಂದಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಈ ಘಟನೆಯ ನಂತರ, ಕದಮ್‌ಕುವಾನ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 109 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25(9), 27, ಮತ್ತು 35 ರ ಅಡಿಯಲ್ಲಿ ಖಾನ್ ಸರ್ ಸೇರಿದಂತೆ ಮೂವರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಬ್ಬರು ಭದ್ರತಾ ಸಿಬ್ಬಂದಿ ಗುಂಡು ಹಾರಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದ್ದು, ಅವರನ್ನು ಈಗಾಗಲೇ ಬಂಧಿಸಲಾಗಿದೆ.








