ಉಮಾಂಗ್ ಆ್ಯಪ್ನಲ್ಲಿ ಫೇಸ್ ಅಥೆಂಟಿಕೇಶನ್
ಇನ್ಮುಂದೆ ಪಿಎಫ್ ಚಂದಾದಾರರು ಕಾಗದ ಪತ್ರಗಳಿಗಾಗಿ ಅಲೆಯುವುದನ್ನು ತಪ್ಪಿಸಲು ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ, ‘ಉಮಾಂಗ್’ (UMANG) ಆ್ಯಪ್ ಮೂಲಕ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು (Face Authentication Technology) ಬಳಸಿ ಯುಎನ್ (UAN – Universal Account Number) ಸಂಖ್ಯೆಯನ್ನು ಸುಲಭವಾಗಿ ಜನರೇಟ್ ಮಾಡಬಹುದು ಅಥವಾ ಆಕ್ಟಿವೇಟ್ ಮಾಡಿಕೊಳ್ಳಬಹುದು. ಇದರೊಂದಿಗೆ ಪಾಸ್ಬುಕ್ ವೀಕ್ಷಣೆ, ವೈಯಕ್ತಿಕ ವಿವರಗಳ ನವೀಕರಣ (Update) ಮತ್ತು ಕಡಿಮೆ ದಾಖಲೆಗಳೊಂದಿಗೆ ಆನ್ಲೈನ್ನಲ್ಲಿ ಕ್ಲೈಮ್ಗಳನ್ನು ಸಲ್ಲಿಸುವ ಸೌಲಭ್ಯವನ್ನು ಇದು ಒಳಗೊಂಡಿದೆ.
ಪ್ರಾದೇಶಿಕ ಭಾಷೆಗಳಲ್ಲಿ ವಾಟ್ಸಾಪ್ ಸೇವೆ
ಗ್ರಾಹಕರ ಸಹಾಯಕ್ಕಾಗಿ ಇಪಿಎಫ್ಒ ಶೀಘ್ರದಲ್ಲೇ ವಾಟ್ಸಾಪ್ ಆಧಾರಿತ ಸೇವೆಗಳನ್ನು ಪರಿಚಯಿಸುತ್ತಿದೆ. ಅಧಿಕೃತ (Verified) ವಾಟ್ಸಾಪ್ ಚಾನೆಲ್ ಮೂಲಕ ಚಂದಾದಾರರು ತಮಗೆ ಬೇಕಾದ ಮಾಹಿತಿ ಮತ್ತು ಸಹಾಯವನ್ನು ಪಡೆಯಬಹುದು. ವಿಶೇಷವೆಂದರೆ, ಭಾರತದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಈ ಸೇವೆ ಲಭ್ಯವಿರಲಿದ್ದು, ಭಾಷೆಯ ಸಮಸ್ಯೆಯಿಲ್ಲದೆ ಸಾಮಾನ್ಯ ಜನರಿಗೂ ಪಿಎಫ್ ಮಾಹಿತಿ ಸಿಗುವಂತಾಗಲಿದೆ.
ಕಾಗದ ರಹಿತ (Paperless) ವ್ಯವಸ್ಥೆಯನ್ನು ಜಾರಿಗೆ ತರುವುದು, ಪ್ರಕ್ರಿಯೆಗಳನ್ನು ವೇಗಗೊಳಿಸುವುದು ಹಾಗೂ ಚಂದಾದಾರರು ತಮ್ಮ ಪಿಎಫ್ ಉಳಿತಾಯದ ಹಣವನ್ನು ಯಾವುದೇ ಅಡೆತಡೆಯಿಲ್ಲದೆ ಶೀಘ್ರವಾಗಿ ಪಡೆಯುವಂತೆ ಮಾಡುವುದೇ ‘ಇಪಿಎಫ್ಒ 3.0’ ರ ಪ್ರಮುಖ ಆಶಯವಾಗಿದೆ.