ಬೆಂಗಳೂರು: ಕರ್ನಾಟಕದಿಂದ ತೆರವಾಗಿದ್ದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾರಿ ರಾಜಕೀಯ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ನಾಲ್ಕೂ ಸ್ಥಾನಗಳಿಗೆ ಸಲ್ಲಿಕೆಯಾಗಿದ್ದ ನಾಲ್ಕು ನಾಮಪತ್ರಗಳು ಕ್ರಮಬದ್ಧವಾಗಿರುವುದರಿಂದ, ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ. ಯಾವುದೇ ಹೆಚ್ಚುವರಿ ಅಭ್ಯರ್ಥಿಗಳು ಕಣದಲ್ಲಿ ಇಲ್ಲದ ಕಾರಣ ಮತದಾನದ ಪ್ರಕ್ರಿಯೆಯಿಲ್ಲದೆಯೇ ಅಭ್ಯರ್ಥಿಗಳು ಸಂಸತ್ತಿನ ಮೇಲ್ಮನೆಗೆ ಪ್ರವೇಶಿಸಲಿದ್ದಾರೆ.
ನಾಮಪತ್ರಗಳ ಪರಿಶೀಲನೆ ಪೂರ್ಣ
ವಿಧಾನಸೌಧದಲ್ಲಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೆ. ಎಂ. ವಿಶಾಲಾಕ್ಷಿ ಅವರು ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಕೂಲಂಕಷ ಪರಿಶೀಲನೆ ನಡೆಸಿದರು. ಪರಿಶೀಲನೆಯ ನಂತರ ಎಲ್ಲಾ ನಾಲ್ಕೂ ಅಭ್ಯರ್ಥಿಗಳ ನಾಮಪತ್ರಗಳು ತಾಂತ್ರಿಕವಾಗಿ ಹಾಗೂ ಕಾನೂನುಬದ್ಧವಾಗಿ ಸರಿಯಾಗಿವೆ ಎಂದು ಧೃಡೀಕರಿಸಿ, ಅವುಗಳನ್ನು ಅಧಿಕೃತವಾಗಿ ಅಂಗೀಕರಿಸಿದ್ದಾರೆ. ಇದರಿಂದಾಗಿ ಅಭ್ಯರ್ಥಿಗಳ ಆಯ್ಕೆಯ ಹಾದಿ ಸುಗಮಗೊಂಡಿದೆ.
ಕಾಂಗ್ರೆಸ್‌ನಿಂದ ಮೂವರು, ಬಿಜೆಪಿಯಿಂದ ಓರ್ವ ಅಭ್ಯರ್ಥಿ
ಸಂಖ್ಯಾಬಲದ ಆಧಾರದ ಮೇಲೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಕಾಂಗ್ರೆಸ್ ಪಕ್ಷದಿಂದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿಖಾನ್ ಹಾಗೂ ಪವನ್ ಖೇರಾ ನಾಮಪತ್ರ ಸಲ್ಲಿಸಿದ್ದರು. ಇತ್ತ ಭಾರತಿಯ ಜನತಾ ಪಾರ್ಟಿ (ಬಿಜೆಪಿ) ವತಿಯಿಂದ ನಾಗರಾಜು ಅವರು ತಮ್ಮ ಉಮೇದುವಾರಿಕೆ ಸರೆ ಹಿಡಿದಿದ್ದರು. ಕಣದಲ್ಲಿ ಕೇವಲ ನಾಲ್ಕು ಸ್ಥಾನಗಳಿಗೆ ನಾಲ್ಕೇ ನಾಮಪತ್ರಗಳು ಬಂದಿರುವುದು ವಿಶೇಷವಾಗಿತ್ತು.
ತಪ್ಪಿದ ಮತದಾನದ ಪ್ರಕ್ರಿಯೆ
ಸಾಮಾನ್ಯವಾಗಿ ರಾಜ್ಯಸಭಾ ಸ್ಥಾನಗಳಿಗೆ ಹೆಚ್ಚುವರಿ ಅಭ್ಯರ್ಥಿಗಳು ಕಣದಲ್ಲಿದ್ದರೆ ಶಾಸಕರಿಂದ ರಹಸ್ಯ ಮತದಾನದ ಪ್ರಕ್ರಿಯೆ ನಡೆಯುತ್ತದೆ. ಆದರೆ ಈ ಬಾರಿ ಯಾವುದೇ ರಾಜಕೀಯ ಪಕ್ಷಗಳು ಹೆಚ್ಚುವರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ, ಸೌಹಾರ್ದಯುತವಾಗಿ ಸ್ಥಾನಗಳನ್ನು ಹಂಚಿಕೊಂಡಿವೆ. ಇದರಿಂದಾಗಿ ಯಾವುದೇ ರೀತಿಯ ಕುದುರೆ ವ್ಯಾಪಾರ ಅಥವಾ ರಾಜಕೀಯ ಹಗ್ಗಜಗ್ಗಾಟಕ್ಕೆ ಆಸ್ಪದವಿಲ್ಲದಂತೆ ಮತದಾನ ಪ್ರಕ್ರಿಯೆ ಇಲ್ಲದೆಯೇ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜೂನ್ 11ಕ್ಕೆ ಅಧಿಕೃತ ಘೋಷಣೆ
ಚುನಾವಣಾ ವೇಳಾಪಟ್ಟಿಯ ಪ್ರಕಾರ, ನಾಮಪತ್ರಗಳನ್ನು ಹಿಂಪಡೆಯಲು ಜೂನ್ 11 ಕೊನೆಯ ದಿನವಾಗಿರುತ್ತದೆ. ಕಣದಲ್ಲಿರುವ ನಾಲ್ಕೂ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆಯುವ ಸಾಧ್ಯತೆ ಇಲ್ಲದಿರುವುದರಿಂದ, ಅಂದು ಸಂಜೆ ನಾಮಪತ್ರ ಹಿಂಪಡೆಯುವ ಸಮಯ ಮುಗಿಯುತ್ತಿದ್ದಂತೆ ಚುನಾವಣಾ ಅಧಿಕಾರಿಗಳು ಈ ನಾಲ್ವರೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿ, ಪ್ರಮಾಣಪತ್ರ ವಿತರಿಸಲಿದ್ದಾರೆ.








