ಬೆಳಗಾವಿ: ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ಹಣ ವಂಚಿಸಿದ ಆರೋಪದ ಮೇಲೆ ಈಗಾಗಲೇ ಜೈಲು ಪಾಲಾಗಿರುವ ಬೆಳಗಾವಿಯ ‘ಶಿವಂ ಅಸೋಸಿಯೇಟ್ಸ್’ ಮಾಲೀಕ ಶಿವಾನಂದ ನೀಲಣ್ಣವರ್ ಪ್ರಕರಣ, ಇದೀಗ ಸ್ಯಾಂಡಲ್ವುಡ್ ಅಂಗಳಕ್ಕೆ ಲಗ್ಗೆ ಇಟ್ಟಿದೆ. ಆರೋಪಿ ಶಿವಾನಂದ ತನ್ನ ಸಂಸ್ಥೆಯ ಪ್ರಚಾರಕ್ಕಾಗಿ ಹೂಡಿಕೆದಾರರ ಕಷ್ಟದ ಹಣವನ್ನು ಬಳಸಿ ಸ್ಟಾರ್ ನಟ-ನಟಿಯರನ್ನು ಕರೆಸಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದೇ ಈಗ ಚಿತ್ರರಂಗದ ಗಣ್ಯರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಅಕ್ರಮ ಹಣದ ವಹಿವಾಟಿಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಸ್ಯಾಂಡಲ್ವುಡ್ ತಾರೆಯರಿಗೆ ನೋಟಿಸ್ ನೀಡಲು ಸಜ್ಜಾಗಿದ್ದಾರೆ.
‘ಬೆಳಗಾವಿ ಹಬ್ಬ’ದ ಹೆಸರಲ್ಲಿ ಅದ್ದೂರಿ ಕಾರ್ಯಕ್ರಮ: ಕಳೆದ ವರ್ಷ ಡಿಸೆಂಬರ್ 27 ರಂದು ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣವರ್ ನೇತೃತ್ವದಲ್ಲಿ ‘ಬೆಳಗಾವಿ ಹಬ್ಬ’ ಎಂಬ ಅದ್ದೂರಿ ಉತ್ಸವವನ್ನು ಆಯೋಜಿಸಲಾಗಿತ್ತು. ಬೆಳಗಾವಿಯ ಕರವೇ ಜಿಲ್ಲಾಧ್ಯಕ್ಷ ಹಾಗೂ ಸಿನಿಮಾ ನಟ ಎಂದು ಹೇಳಿಕೊಳ್ಳುವ ಅಭಿಲಾಷ್ ನೇತೃತ್ವದಲ್ಲಿ ಈ ಇಡೀ ಕಾರ್ಯಕ್ರಮ ನಡೆದಿತ್ತು. ಸಾರ್ವಜನಿಕರನ್ನು ಸೆಳೆಯಲು ಹಾಗೂ ತಾನೊಬ್ಬ ದೊಡ್ಡ ಉದ್ಯಮಿ ಎಂದು ಬಿಂಬಿಸಿಕೊಳ್ಳಲು ಆರೋಪಿ ಶಿವಾನಂದ ಈ ವೇದಿಕೆಯನ್ನು ಬಳಸಿಕೊಂಡಿದ್ದ ಎನ್ನಲಾಗಿದೆ.
ವೇದಿಕೆ ಹಂಚಿಕೊಂಡಿದ್ದ ಸ್ಟಾರ್ ನಟ-ನಟಿಯರು: ಅಂದು ನಡೆದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಖ್ಯಾತ ನಟರಾದ ಡಾಲಿ ಧನಂಜಯ, ಸಪ್ತಮಿ ಗೌಡ, ನೀನಾಸಂ ಸತೀಶ್, ರಾಗಿಣಿ ದ್ವಿವೇದಿ, ದಿಗಂತ್ ಹಾಗೂ ಐಂದ್ರಿತಾ ರೈ ದಂಪತಿ, ವಶಿಷ್ಠ ಸಿಂಹ ಮತ್ತು ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರಂಗು ತುಂಬಿದ್ದರು. ಹೂಡಿಕೆದಾರರ ಕೋಟ್ಯಂತರ ರೂಪಾಯಿ ವಂಚನೆಯ ಹಣದಲ್ಲೇ ಈ ಎಲ್ಲ ತಾರೆಯರನ್ನು ಕರೆಸಲಾಗಿತ್ತು ಎಂಬ ಗಂಭೀರ ಆರೋಪ ಈಗ ಕೇಳಿಬಂದಿದೆ.
ಹಣದ ಮೂಲ ಕೆದಕುತ್ತಿರುವ ಸಿಐಡಿ: ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ (CID) ಅಧಿಕಾರಿಗಳು, ಶಿವಾನಂದ ನೀಲಣ್ಣವರ್ ಈ ಸಿನಿಮಾ ತಾರೆಗಳಿಗೆ ಎಷ್ಟು ರೂಪಾಯಿ ಸಂಭಾವನೆ (ರೆಮ್ಯುನರೇಷನ್) ನೀಡಿದ್ದಾರೆ? ಎಂಬ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ. ತಾರೆಯರಿಗೆ ಸಂದಾಯವಾಗಿರುವ ಹಣ ಬ್ಯಾಂಕ್ ಅಕೌಂಟ್ ಮೂಲಕ ಹೋಗಿದೆಯೇ? ಅಥವಾ ಚೆಕ್ ಹಾಗೂ ನಗದು (ಕ್ಯಾಶ್) ರೂಪದಲ್ಲಿ ಕೈಬದಲಾಗಿದೆಯೇ? ಎಂಬ ಬಗ್ಗೆ ಆರೋಪಿಯ ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ಸಿಐಡಿ ತೀವ್ರವಾಗಿ ಪರಿಶೀಲಿಸುತ್ತಿದೆ.
ಖುದ್ದಾಗಿ ಹಾಜರಾಗಲು ನೋಟಿಸ್ ಜಾರಿ? ಸಾರ್ವಜನಿಕರ ಹಣವನ್ನು ಅಕ್ರಮವಾಗಿ ಲೂಟಿ ಮಾಡಿ, ಅದನ್ನು ಸಿನಿ ತಾರೆಗಳ ಕಾರ್ಯಕ್ರಮಕ್ಕೆ ಬಳಸಿರುವ ಹಿನ್ನೆಲೆಯಲ್ಲಿ ಈ ಎಲ್ಲ ನಟ-ನಟಿಯರಿಗೂ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ. ಸದ್ಯದಲ್ಲೇ ಈ ತಾರೆಯರು ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ತಮಗೆ ಬಂದ ಹಣದ ಮೂಲ ಹಾಗೂ ಕಾರ್ಯಕ್ರಮದ ಒಪ್ಪಂದದ ಬಗ್ಗೆ ಸ್ಪಷ್ಟನೆ ನೀಡಬೇಕಾಗುವ ಸಾಧ್ಯತೆ ದಟ್ಟವಾಗಿದೆ. ಇದು ಸ್ಯಾಂಡಲ್ವುಡ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.








