ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಕೋಟ್ಯಂತರ ಖಾತೆದಾರರಿಗೆ ದೊಡ್ಡ ರಿಲೀಫ್ ನೀಡಿದೆ. ತನ್ನ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿರುವ ಇಪಿಎಫ್‌ಒ, ಕೆಲವು ವಿಶೇಷ ಸಂದರ್ಭಗಳಲ್ಲಿ ಖಾತೆದಾರರು ತಮ್ಮ ಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು (ಶೇ. 100 ರಷ್ಟು) ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ.
ಅತ್ಯಂತ ಪ್ರಮುಖ ವಿಷಯವೆಂದರೆ, ಅರ್ಹ ಸದಸ್ಯರು ಇನ್ಮುಂದೆ ಈ ಹಣವನ್ನು ವಿತ್‌ಡ್ರಾ ಮಾಡಲು ಯಾವುದೇ ಕಾರಣವನ್ನು ನೀಡುವ ಅಗತ್ಯವಿರುವುದಿಲ್ಲ. ಪಿಎಫ್ ಕ್ಲೈಮ್‌ಗಳು ತಿರಸ್ಕಾರಗೊಳ್ಳುವುದನ್ನು ತಪ್ಪಿಸಲು ಮತ್ತು ತುರ್ತು ಸಂದರ್ಭದಲ್ಲಿ ಉದ್ಯೋಗಿಗಳಿಗೆ ಸಕಾಲದಲ್ಲಿ ಆರ್ಥಿಕ ಸಹಾಯ ಸಿಗುವಂತೆ ಮಾಡಲು ಇಪಿಎಫ್‌ಒ ಈ ನಿರ್ಧಾರ ಕೈಗೊಂಡಿದೆ.
ನಿಯಮಗಳಲ್ಲಾದ ಪ್ರಮುಖ ಬದಲಾವಣೆಗಳೇನು?
ಹಿಂದಿನ ನಿಯಮಗಳ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ ಸಂಪೂರ್ಣ ಪಿಎಫ್ ಹಣವನ್ನು ಹಿಂಪಡೆಯಲು ಸದಸ್ಯರು ಸೂಕ್ತ ಕಾರಣ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳು ಅಥವಾ ಪುರಾವೆಗಳನ್ನು ಸಲ್ಲಿಸಬೇಕಾಗಿತ್ತು. ಒಂದು ವೇಳೆ ಕಾರಣ ಅಥವಾ ದಾಖಲೆಗಳು ಸರಿಯಾಗಿಲ್ಲದಿದ್ದರೆ ಅಧಿಕಾರಿಗಳು ಕ್ಲೈಮ್‌ಗಳನ್ನು ತಿರಸ್ಕರಿಸುತ್ತಿದ್ದರು. ಅಲ್ಲದೆ, ಈ ಹಿಂದೆ ಕೇವಲ ಶೇ. 75 ರಷ್ಟು ಬ್ಯಾಲೆನ್ಸ್ ಮಾತ್ರ ಹಿಂಪಡೆಯಲು ಅವಕಾಶವಿತ್ತು.
ಆದರೆ, ಈಗ ಖಾತೆದಾರರ ಅಲೆದಾಟವನ್ನು ತಪ್ಪಿಸಲು ಇಪಿಎಫ್‌ಒ ನಿಯಮಗಳನ್ನು ಸಡಿಲಗೊಳಿಸಿದೆ. ಇನ್ಮುಂದೆ ಯಾವುದೇ ಕಾರಣ ನೀಡದೆ ವಿಶೇಷ ಪ್ರಕರಣದ ಅಡಿಯಲ್ಲಿ ಶೇ. 100 ರಷ್ಟು ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಘೋಷಿಸಿದೆ. ಇತ್ತೀಚಿನ ದಿನಗಳಲ್ಲಿ ಪಿಎಫ್ ಸಂಸ್ಥೆಯು ಕ್ಲೈಮ್ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡಲು ಹಲವು ಸುಧಾರಣೆಗಳನ್ನು ತರುತ್ತಿದ್ದು, ಇದು ಅದರದೇ ಒಂದು ಭಾಗವಾಗಿದೆ.
ಯಾವೆಲ್ಲಾ ಸಂದರ್ಭಗಳಲ್ಲಿ 100% ಹಣವನ್ನು ಹಿಂಪಡೆಯಬಹುದು?
ಕೆಳಗಿನ ವಿಶೇಷ ಸಂದರ್ಭಗಳಲ್ಲಿ ಉದ್ಯೋಗಿಗಳು ತಮ್ಮ ಪಿಎಫ್ ಖಾತೆಯ ಸಂಪೂರ್ಣ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ:
ಕಂಪನಿ ಲಾಕೌಟ್ / ಮುಚ್ಚಿ ಹಾಕುವುದು: ಉದ್ಯೋಗಿ ಕೆಲಸ ಮಾಡುವ ಕಂಪನಿಯು 15 ದಿನಗಳಿಗಿಂತ ಹೆಚ್ಚು ಕಾಲ ಲಾಕೌಟ್ ಆಗಿದ್ದರೆ ಅಥವಾ ಮುಚ್ಚಲ್ಪಟ್ಟಿದ್ದರೆ.
ಉದ್ಯೋಗ ನಷ್ಟ: ಯಾವುದೇ ಪರಿಹಾರವಿಲ್ಲದೆ ಉದ್ಯೋಗಿ ನಿರುದ್ಯೋಗಿಯಾಗಿದ್ದರೆ.
ವೇತನ ಪಾವತಿಯಾಗದಿದ್ದರೆ: ಸತತ ಎರಡು ತಿಂಗಳುಗಳಿಗಿಂತ ಹೆಚ್ಚು ಕಾಲ ಕಂಪನಿಯಿಂದ ಸಂಬಳ ಬರದೇ ಇದ್ದರೆ.
ಕಾನೂನು ಮತ್ತು ಉದ್ಯೋಗದ ಸಮಸ್ಯೆಗಳು: ಉದ್ಯೋಗಿಯ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇದ್ದಾಗ, ಕೆಲಸದಿಂದ ವಜಾಗೊಳಿಸಿದಾಗ, ಸ್ವಯಂ ನಿವೃತ್ತಿ ಅಥವಾ ಉದ್ಯೋಗ ಕಡಿತದ ಸಂದರ್ಭಗಳಲ್ಲಿ.
ದೀರ್ಘಕಾಲದ ನಿರುದ್ಯೋಗ: ಉದ್ಯೋಗಿ ದೀರ್ಘಕಾಲದವರೆಗೆ ನಿರುದ್ಯೋಗಿಯಾಗಿ ಉಳಿದಾಗ.
ಆರೋಗ್ಯ ತುರ್ತು ಪರಿಸ್ಥಿತಿ: ಗಂಭೀರ ಕಾಯಿಲೆ ಅಥವಾ ಕುಟುಂಬದ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ ದೊಡ್ಡ ಮೊತ್ತದ ಹಣದ ಅಗತ್ಯವಿರುವ ಸಂದರ್ಭಗಳಲ್ಲಿ ಸಂಪೂರ್ಣ ಪಿಎಫ್ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.








