ನವದೆಹಲಿ: ಕ್ಯಾನ್ಸರ್ ರೋಗಗಳಲ್ಲೇ ಅತ್ಯಂತ ಅಪಾಯಕಾರಿ ಹಾಗೂ ಗುಣಪಡಿಸಲು ಕಷ್ಟಸಾಧ್ಯ ಎನ್ನಲಾಗುವ ಮೇದೋಜ್ಜೀರಕ ಗ್ರಂಥಿಯ (Pancreatic Cancer) ಕ್ಯಾನ್ಸರ್ ರೋಗಿಗಳಿಗೆ ಇದೀಗ ಹೊಸದೊಂದು ಪ್ರಾಯೋಗಿಕ ಮಾತ್ರೆ ಆಶಾಕಿರಣವಾಗಿ ಮೂಡಿಬಂದಿದೆ. ಈ ಹೊಸ ಔಷಧಿಯು ರೋಗಿಗಳ ಜೀವಿತಾವಧಿಯನ್ನು ದುಪ್ಪಟ್ಟುಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ತಜ್ಞರು ತಿಳಿಸಿದ್ದಾರೆ.
ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕಾಲಜಿ (ASCO) ವಾರ್ಷಿಕ ಸಭೆಯಲ್ಲಿ ಮಂಡಿಸಲಾದ ಅಂತರರಾಷ್ಟ್ರೀಯ ಸಂಶೋಧನಾ ವರದಿಯ ಪ್ರಕಾರ, ‘ಡ್ಯಾರಾಕ್ಸಾನ್‌ರಾಸಿಬ್’ (Daraxonrasib) ಹೆಸರಿನ ಈ ದಿನಕ್ಕೊಮ್ಮೆ ತೆಗೆದುಕೊಳ್ಳುವ ಮಾತ್ರೆ, ಮುಂದುವರಿದ ಹಂತದ ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ ರೋಗಿಗಳಲ್ಲಿ ಉತ್ತಮ ಫಲಿತಾಂಶ ನೀಡಿದೆ. ಈ ಮುನ್ನ ಇತರ ಚಿಕಿತ್ಸೆಗಳು ಫಲಿಸದೇ ಇದ್ದ ರೋಗಿಗಳಲ್ಲಿಯೂ ಇದು ಜೀವಿತಾವಧಿಯನ್ನು ಸುಮಾರು ದುಪ್ಪಟ್ಟುಗೊಳಿಸಿದೆ ಎಂದು ವರದಿ ಹೇಳಿದೆ.
ಈ ಮಾತ್ರೆ ಹೇಗೆ ಕೆಲಸ ಮಾಡುತ್ತದೆ?
ಹೆಚ್ಚಿನ ಮೇದೋಜ್ಜೀರಕ ಗ್ರಂಥಿಯ ಗಡ್ಡೆಗಳಲ್ಲಿ ಕಂಡುಬರುವ ಮತ್ತು ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗುವ ‘KRAS’ ಎಂಬ ಜೀನ್ ರೂಪಾಂತರವನ್ನು (Mutation) ಗುರಿಯಾಗಿಸಿಕೊಂಡು ಈ ಮಾತ್ರೆ ಕೆಲಸ ಮಾಡುತ್ತದೆ. ಈ ಜೀನ್ ಅನ್ನು ಪರಿಣಾಮಕಾರಿಯಾಗಿ ನಿಷ್ಕ್ರಿಯಗೊಳಿಸಲು ಸಂಶೋಧಕರು ದಶಕಗಳಿಂದ ಪ್ರಯತ್ನಿಸುತ್ತಿದ್ದರು. ಈ ಯಶಸ್ಸು ಕ್ಯಾನ್ಸರ್ ತಜ್ಞರಲ್ಲಿ ಭಾರಿ ಉತ್ಸಾಹವನ್ನು ಮೂಡಿಸಿದೆ.
ತಜ್ಞರು ಏನನ್ನುತ್ತಾರೆ?
ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್‌ನ ಜಿಐ ಕ್ಯಾನ್ಸರ್ ಮತ್ತು ಜೆರಿಯಾಟ್ರಿಕ್ ಆಂಕಾಲಜಿ ತಜ್ಞರಾದ ಪ್ರೊಫೆಸರ್ ಅನಂತ್ ರಾಮಸ್ವಾಮಿ ಅವರು ಈ ಕುರಿತು ಮಾತನಾಡುತ್ತಾ:
“ಹಲವು ವರ್ಷಗಳಿಂದ, ತೀವ್ರ ಹಂತದ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ರೋಗಿಗಳ ಸರಾಸರಿ ಜೀವಿತಾವಧಿ ಕೇವಲ ಒಂದು ವರ್ಷದ ಆಸುಪಾಸಿನಲ್ಲಿದೆ. 1990ರ ದಶಕದ ಕೊನೆಯಲ್ಲಿ ಇದು ಕೇವಲ 6 ತಿಂಗಳಾಗಿತ್ತು ಮತ್ತು ಮೂರು ದಶಕಗಳ ಸಕ್ರಿಯ ಸಂಶೋಧನೆಯ ನಂತರವೂ ಇದು ಕೇವಲ 9 ರಿಂದ 12 ತಿಂಗಳುಗಳಷ್ಟೇ ಇತ್ತು. ಕಳೆದ ಎರಡು ದಶಕಗಳಲ್ಲಿ ಚಿಕಿತ್ಸೆಯ ಸುಧಾರಣೆಗಳು ಅತ್ಯಂತ ನಿಧಾನಗತಿಯಲ್ಲಿದ್ದವು.”
ಮುಂದುವರಿದು ಮಾತನಾಡಿದ ಅವರು, “ಇಂತಹ ಪರಿಸ್ಥಿತಿಯಲ್ಲಿ, ಈಗಾಗಲೇ ಬೇರೆ ಚಿಕಿತ್ಸೆ ಪಡೆದು ಫಲಿತಾಂಶ ಕಾಣದ ರೋಗಿಗಳಲ್ಲಿ ಕೇವಲ ಒಂದು ಮಾತ್ರೆ ಜೀವಿತಾವಧಿಯನ್ನು ದ್ವಿಗುಣಗೊಳಿಸುವುದು ನಿಜಕ್ಕೂ ಅದ್ಭುತ ಸುದ್ದಿ. ಅಲ್ಲದೆ, ಈ ಹೊಸ ವರ್ಗದ ಇತರೆ ಔಷಧಗಳ ಸಂಶೋಧನೆಗೆ ಇದು ಕೇವಲ ಆರಂಭವಷ್ಟೇ. ಮುಂಬರುವ ದಿನಗಳಲ್ಲಿ ರೋಗಿಗಳು ಮತ್ತು ವೈದ್ಯರು ಇನ್ನಷ್ಟು ಉತ್ತಮ ಸುಧಾರಣೆಗಳನ್ನು ನಿರೀಕ್ಷಿಸಬಹುದು,” ಎಂದು ತಿಳಿಸಿದ್ದಾರೆ.








