ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬಹುಕೋಟಿ ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (SIT) ಇದೀಗ ಪ್ರಮುಖ ತನಿಖಾ ವರದಿಯನ್ನು ಕೋರ್ಟ್ಗೆ ಸಲ್ಲಿಸಿದೆ. ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಸೇರಿದಂತೆ ಹಲವು ಪ್ರಮುಖ ಆರೋಪಿಗಳ ವಿರುದ್ಧ ಎಸ್ಐಟಿ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಕೆ ಮಾಡಿದ್ದು, ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಪ್ರಮುಖ ಆರೋಪಿಗಳ ವಿರುದ್ಧ ಚಾರ್ಜ್ಶೀಟ್
ಬಿಟ್ಕಾಯಿನ್ ಹಗರಣದ ಮೂಲ ಸೂತ್ರಧಾರಿ ಎನ್ನಲಾದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಆತನ ಆಪ್ತ ರಾಬಿನ್ ಖಂಡೇವಾಲ ಮತ್ತು ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಸೇರಿದಂತೆ ಇತರರ ವಿರುದ್ಧ ಎಸ್ಐಟಿ ಪೊಲೀಸರು ನ್ಯಾಯಾಲಯಕ್ಕೆ ಸುದೀರ್ಘವಾದ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಕಲೆಹಾಕಲಾಗಿರುವ ಡಿಜಿಟಲ್ ಸಾಕ್ಷ್ಯಗಳು ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೊಹಮ್ಮದ್ ನಲಪಾಡ್ಗೆ ಹಣ ಸಂದಾಯ?
ಈ ಚಾರ್ಜ್ಶೀಟ್ನಲ್ಲಿ ಅತ್ಯಂತ ಸ್ಫೋಟಕ ಅಂಶವೆಂದರೆ, ಹ್ಯಾಕರ್ ಶ್ರೀಕಿಯಿಂದ ಮೊಹಮ್ಮದ್ ನಲಪಾಡ್ಗೆ ಕೋಟ್ಯಂತರ ರೂಪಾಯಿ ಹಣ ಸಂದಾಯವಾಗಿರುವ ಬಗ್ಗೆ ಎಸ್ಐಟಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಬಿಟ್ಕಾಯಿನ್ ಮೂಲದ ಅಕ್ರಮ ಹಣವು ನಲಪಾಡ್ ಅವರ ಕೈಸೇರಿದೆ ಎಂಬುದಕ್ಕೆ ಬೇಕಾದ ಆರ್ಥಿಕ ವಹಿವಾಟಿನ ದಾಖಲೆಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿ ಚಾರ್ಜ್ಶೀಟ್ನಲ್ಲಿ ಜೋಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಗದೀಕರಣಕ್ಕೆ ಶ್ರೀಕಿ ಸ್ಕೆಚ್
ಹ್ಯಾಕಿಂಗ್ ಮೂಲಕ ಗಳಿಸಿದ್ದ ಬಿಟ್ಕಾಯಿನ್ಗಳನ್ನು ಭಾರತೀಯ ರೂಪಾಯಿಗೆ ನಗದೀಕರಣ (ಕ್ಯಾಶ್ ಮಾಡಿಕೊಳ್ಳಲು) ಮಾಡಲು ಹ್ಯಾಕರ್ ಶ್ರೀಕಿ ಭಾರಿ ಕಸರತ್ತು ನಡೆಸಿದ್ದ. ಇದೇ ಕಾರಣಕ್ಕಾಗಿ ಆತ ಮೊಹಮ್ಮದ್ ನಲಪಾಡ್ನನ್ನು ಸಂಪರ್ಕಿಸಿದ್ದ ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ. ಕ್ರಿಪ್ಟೋ ಕರೆನ್ಸಿಯನ್ನು ಸುಲಭವಾಗಿ ಮತ್ತು ಯಾರಿಗೂ ಅನುಮಾನ ಬಾರದಂತೆ ನಗದಾಗಿ ಪರಿವರ್ತಿಸಲು ರಾಜಕೀಯ ಪ್ರಭಾವ ಬಳಸಲು ಶ್ರೀಕಿ ಮುಂದಾಗಿದ್ದ ಎನ್ನಲಾಗಿದೆ.
ಸ್ನೇಹಿತರ ಮೂಲಕ ಹಣ ವರ್ಗಾವಣೆ ಆರೋಪ
ನೇರವಾಗಿ ಹಣ ಪಡೆದರೆ ಸಿಕ್ಕಿಬೀಳುವ ಭೀತಿಯಿಂದ, ನಲಪಾಡ್ ತಮ್ಮ ಆಪ್ತ ಸ್ನೇಹಿತರ ನೆರವು ಪಡೆದಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಶ್ರೀಕಿ ಸಂಪರ್ಕದಲ್ಲಿದ್ದ ಮಧ್ಯವರ್ತಿಗಳು ಮತ್ತು ನಲಪಾಡ್ ಅವರ ಸ್ನೇಹಿತರ ಬ್ಯಾಂಕ್ ಖಾತೆಗಳ ಮೂಲಕ ಈ ಡಿಜಿಟಲ್ ಹಣವನ್ನು ನಗದೀಕರಿಸಿ ವರ್ಗಾವಣೆ ಮಾಡಲಾಗಿದೆ. ಈ ಎಲ್ಲ ಸರಣಿ ಆರ್ಥಿಕ ವಹಿವಾಟುಗಳ ಲಿಂಕ್ಗಳನ್ನು ಎಸ್ಐಟಿ ಸದ್ಯ ಬಿಚ್ಚಿಟ್ಟಿದೆ.
ರಾಜಕೀಯ ವಲಯದಲ್ಲಿ ಸಂಚಲನ
ಈ ಹಿಂದೆ ಕೇವಲ ಆರೋಪಗಳ ಮಟ್ಟದಲ್ಲಿದ್ದ ಬಿಟ್ಕಾಯಿನ್ ದಂಧೆ, ಇದೀಗ ಅಧಿಕೃತವಾಗಿ ಚಾರ್ಜ್ಶೀಟ್ ರೂಪದಲ್ಲಿ ಹೊರಬಂದಿರುವುದು ಕೈ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಎಸ್ಐಟಿ ಸಲ್ಲಿಸಿರುವ ಈ ಚಾರ್ಜ್ಶೀಟ್ ಆಧರಿಸಿ ಮುಂಬರುವ ದಿನಗಳಲ್ಲಿ ಪ್ರಮುಖ ಆರೋಪಿಗಳಿಗೆ ಕಾನೂನು ಉರುಳು ಇನ್ನಷ್ಟು ಬಿಗಿಯಾಗುವ ಸಾಧ್ಯತೆಯಿದೆ.








