ಬೆಂಗಳೂರು : ರಾಜ್ಯದ ಸಾರ್ವಜನಿಕರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಂದಿನಿಂದ (ಜೂನ್ 9) ರಾಜ್ಯದಾದ್ಯಂತ ಸಂಚರಿಸುವ ಖಾಸಗಿ ವಾಹನ ಬಸ್ ಗಳ ಪ್ರಯಾಣ ದರವನ್ನು ಶೇಕಡಾ 5ರಿಂದ 8ರಷ್ಟು ಹೆಚ್ಚಿಸಲಾಗಿದೆ. ಈ ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಲಕ್ಷಾಂತರ ಪ್ರಯಾಣಿಕರ ಮಾಸಿಕ ಖರ್ಚಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಖಾಸಗಿ ವಾಹನ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.ಖಾಸಗಿ ಬಸ್ ಉದ್ಯಮ ಕಳೆದ ಕೆಲವು ವರ್ಷಗಳಿಂದ ನಿರಂತರ ಆರ್ಥಿಕ ಒತ್ತಡವನ್ನು ಎದುರಿಸುತ್ತಿದೆ ಎಂದು ಬಸ್ ಮಾಲೀಕರು ತಿಳಿಸಿದ್ದಾರೆ. ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಅವರು ವಿವರಿಸಿದರು.
ಇಂಧನ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದರಿಂದ ಬಸ್ ನಿರ್ವಹಣೆ ದುಬಾರಿಯಾಗಿದೆ. ಟೈರ್, ಸ್ಪೇರ್ ಪಾರ್ಟ್ಸ್, ದುರಸ್ತಿ ಮತ್ತು ನಿರ್ವಹಣಾ ವೆಚ್ಚಗಳು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಣನೀಯವಾಗಿ ಏರಿವೆ. ಚಾಲಕರು ಹಾಗೂ ನಿರ್ವಾಹಕರ ವೇತನದ ಮೇಲಿನ ಹೆಚ್ಚುವರಿ ಭಾರವೂ ದರ ಪರಿಷ್ಕರಣೆಗೆ ಕಾರಣವಾಗಿದೆ.ರಾಜ್ಯ ಸರ್ಕಾರವು 2020ರಲ್ಲಿ ಹೊರಡಿಸಿದ್ದ ಅಧಿಸೂಚನೆಯ ಅನ್ವಯ ಈ ದರ ಹೆಚ್ಚಳಕ್ಕೆ ಅನುಮೋದನೆ ದೊರೆತಿದೆ. ಅದರಂತೆ ಇಂದಿನಿಂದಲೇ ಪರಿಷ್ಕೃತ ಪ್ರಯಾಣ ದರ ಜಾರಿಗೆ ಬಂದಿದೆ ಎಂದು ಬಸ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ. ಈ ನಿರ್ಧಾರದಿಂದ ಖಾಸಗಿ ಬಸ್‌ಗಳನ್ನು ಅವಲಂಬಿಸಿರುವ ದಿನನಿತ್ಯದ ಪ್ರಯಾಣಿಕರು ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗಲಿದೆ.
ಸಾಮಾನ್ಯ ಪ್ರಯಾಣಿಕರಿಗೆ ದರ ಏರಿಕೆಯ ಹೊರೆ ಬಿದ್ದಿದ್ದರೂ, ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ರಿಯಾಯಿತಿ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗಾಗಲೇ ಜಾರಿಯಲ್ಲಿರುವ ವಿದ್ಯಾರ್ಥಿ ರಿಯಾಯಿತಿಗಳು ಮುಂದುವರಿಯಲಿದ್ದು, ಅವರಿಗೆ ಹೆಚ್ಚುವರಿ ಹಣ ಪಾವತಿಸುವ ಅಗತ್ಯವಿಲ್ಲ ಎಂದು ಬಸ್ ಮಾಲೀಕರ ಒಕ್ಕೂಟ ಭರವಸೆ ನೀಡಿದೆ.








