ಸುದ್ದಿ ಸಂಸ್ಥೆ ಪಿಟಿಐ (PTI) ಪರಿಶೀಲಿಸಿರುವ 7,500 ಪುಟಗಳ ಈ ಬೃಹತ್ ಚಾರ್ಜ್‌ಶೀಟ್‌ನಲ್ಲಿ, ಉಗ್ರರು ರಾಕೆಟ್ ಆಧಾರಿತ ಐಇಡಿ (Rocket IED) ತಯಾರಿಸಿ, ಅದನ್ನು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಖಾಜಿಗುಂಡ್ ಅರಣ್ಯದಲ್ಲಿ ಪರೀಕ್ಷಿಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬಾಂಬ್ ತಯಾರಿಕೆಯಲ್ಲಿ ಉಗ್ರರು “ಲ್ಯಾಬೊರೇಟರಿ ದರ್ಜೆಯ” ಅತ್ಯಾಧುನಿಕ ವಿಧಾನವನ್ನು ಬಳಸಿದ್ದರು ಎನ್ನಲಾಗಿದೆ.
ಹರಿಯಾಣ ವಿವಿಯಲ್ಲಿದ್ದ ತಾಂತ್ರಿಕ ನೆರವುಗಾರ!
ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬನಾದ ಜಾಸಿರ್ ಬಿಲಾಲ್ ವಾನಿ ಎಂಬಾತ, ಈ ಪಿತೂರಿಗೆ ತಾಂತ್ರಿಕ ಬೆಂಬಲ ನೀಡಲು 2024 ಮತ್ತು 2025ರ ನಡುವೆ ಹರಿಯಾಣದ ಫರಿದಾಬಾದ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಎರಡು ಮೂರು ಬಾರಿ ತಂಗಿದ್ದ ಎಂದು ಎನ್‌ಐಎ ತಿಳಿಸಿದೆ. ಈತನನ್ನು ಮತ್ತೊಬ್ಬ ಆರೋಪಿ ಡಾ. ಉಮರ್ ಉನ್ ನಬಿಗೆ, ಡಾ. ಅದೀಲ್ ಅಹ್ಮದ್ ರಾಥರ್ ಎಂಬಾತ ಪರಿಚಯಿಸಿದ್ದ.
ಯೂಟ್ಯೂಬ್, ಚಾಟ್‌ಜಿಪಿಟಿ ಬಳಸಿ ಬಾಂಬ್ ತಯಾರಿ
ದೋಷಾರೋಪ ಪಟ್ಟಿಯ ಪ್ರಕಾರ, ಡಾ. ಅದೀಲ್ ಬಾಂಬ್ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳಾದ ಸಕ್ಕರೆ ಪುಡಿ ಮತ್ತು ಎನ್‌ಪಿಕೆ (NPK) ರಸಗೊಬ್ಬರ ರೂಪದಲ್ಲಿದ್ದ ಪೊಟ್ಯಾಸಿಯಮ್ ನೈಟ್ರೇಟ್ ಅನ್ನು ಜಾಸಿರ್‌ನಿಗೆ ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಇದನ್ನು ಪಡೆದ ಜಾಸಿರ್, ಯೂಟ್ಯೂಬ್ ಮತ್ತು ಚಾಟ್‌ಜಿಪಿಟಿ (ChatGPT) ಮೂಲಕ “ರಾಕೆಟ್ ಮಾಡುವುದು ಹೇಗೆ ಮತ್ತು ಅದಕ್ಕೆ ಮಿಶ್ರಣದ ಪ್ರಮಾಣ ಎಷ್ಟು ಇರಬೇಕು?” ಎಂದು ಹುಡುಕಾಟ ನಡೆಸಿದ್ದ.
ತನಿಖೆಯ ಪ್ರಕಾರ, ಜಾಸಿರ್ ಈ ಮಿಶ್ರಣವನ್ನು ಸಿದ್ಧಪಡಿಸಿ ಖಾಜಿಗುಂಡ್ ಕಾಡಿನಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಿದ್ದ. ಅಷ್ಟೇ ಅಲ್ಲದೆ, ಡ್ರೋನ್‌ಗಳ ಹಾರಾಟದ ವ್ಯಾಪ್ತಿ ಮತ್ತು ಅವುಗಳ ತೂಕ ಹೊರುವ ಸಾಮರ್ಥ್ಯವನ್ನು ಹೆಚ್ಚಿಸಲು ಡಾ. ಉಮರ್ ಈತನಿಗೆ ಡ್ರೋನ್‌ಗಳನ್ನು ನೀಡಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸಲು ಈ ಡ್ರೋನ್‌ಗಳಿಗೆ ಶಸ್ತ್ರಾಸ್ತ್ರ ಅಳವಡಿಸುವುದು ಉಮರ್‌ನ ಯೋಜನೆಯಾಗಿತ್ತು.
ಫ್ಲಿಪ್‌ಕಾರ್ಟ್ (Flipkart) ಮೂಲಕ ಬಿಡಿಭಾಗಗಳ ಖರೀದಿ!
ಉಗ್ರರು ಬಾಂಬ್ ಟ್ರಿಗರ್ ಮಾಡಲು ಬೇಕಾಗುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಇ-ಕಾಮರ್ಸ್ ಸಂಸ್ಥೆಯಾದ ಫ್ಲಿಪ್‌ಕಾರ್ಟ್ ಮೂಲಕ ಆರ್ಡರ್ ಮಾಡಿದ್ದರು. ಡಿಸೆಂಬರ್ 2023 ಮತ್ತು ಜನವರಿ 2024 ರ ನಡುವೆ ಜಾಸಿರ್ ಫ್ಲಿಪ್‌ಕಾರ್ಟ್ ಬಳಸಿ:
-
ಸೆನ್ಸಾರ್-ಇಂಡಕ್ಟಿವ್ ಪ್ರಾಕ್ಸಿಮಿಟಿ ಸ್ವಿಚ್
-
ಹೀಟ್ ಗನ್ ಮತ್ತು ಪೀಜೋ ಪ್ಲೇಟ್
-
ರಿಮೋಟ್ ಕಂಟ್ರೋಲ್ ರಿಲೇ-ಸ್ವಿಚ್ ಆರ್‌ಎಫ್ (ರೇಡಿಯೋ ಫ್ರೀಕ್ವೆನ್ಸಿ) ಟ್ರಾನ್ಸ್‌ಮಿಟರ್ ಮತ್ತು ರಿಸೀವರ್ ಕಿಟ್
-
ಫ್ಲೇಮ್‌ಲೆಸ್ ರೀಚಾರ್ಜಬಲ್ ಪಾಕೆಟ್ ಲೈಟರ್
-
ಸೋಲ್ಡರಿಂಗ್ ಕಿಟ್ ಮತ್ತು ಎಲ್‌ಇಡಿ ಎಲೆಕ್ಟ್ರಾನಿಕ್ ಕಿಟ್‌ಗಳನ್ನು ಖರೀದಿಸಿದ್ದ.
ಇದಕ್ಕೆಲ್ಲ ಡಾ. ಉಮರ್ ಹಣಕಾಸಿನ ನೆರವು ನೀಡಿದ್ದು, ಜಾಸಿರ್ ಇವುಗಳನ್ನೆಲ್ಲ ಅಸೆಂಬ್ಲಿ ಮಾಡಿ ಉಮರ್‌ನಿಗೆ ತಲುಪಿಸಿದ್ದ.
ಬಯಲಾದ ‘ವೈಟ್ ಕಾಲರ್’ ಉಗ್ರರ ಜಾಲ
ಈ ಸ್ಫೋಟಕ್ಕೆ ಉಗ್ರರು ಅತ್ಯಂತ ಅಪಾಯಕಾರಿ TATP (Triacetone Triperoxide) ರಾಸಾಯನಿಕ ಸ್ಫೋಟಕವನ್ನು ಬಳಸಿದ್ದರು. ಕರಾರುವಾಕ್ಕಾಗಿ ಸ್ಫೋಟಗೊಳ್ಳುವಂತೆ ಮಾಡಲು ಇವರು ರಹಸ್ಯವಾಗಿ ಹಲವು ಪ್ರಯೋಗಗಳನ್ನು ನಡೆಸಿದ್ದರು.
ಇದಕ್ಕೂ ಮುನ್ನ ಶ್ರೀನಗರ ಪೊಲೀಸರು ಈ ಪ್ರಕರಣಕ್ಕೆ ಲಿಂಕ್ ಹೊಂದಿದ್ದ ವೈದ್ಯಕೀಯ ವೃತ್ತಿಪರರಿದ್ದ “ಡಾಕ್ಟರ್” ಅಥವಾ “ವೈಟ್ ಕಾಲರ್” ಉಗ್ರರ ಮಾಡ್ಯೂಲ್ ಅನ್ನು ಧ್ವಂಸಗೊಳಿಸಿದ್ದರು. ವೈಜ್ಞಾನಿಕ ಮತ್ತು ವಿಧಿವಿಜ್ಞಾನ (Forensic) ತನಿಖೆಯ ನಂತರ ಇದೊಂದು ದೊಡ್ಡ “ಜಿಹಾದಿ ಪಿತೂರಿ” ಎಂಬುದು ಸಾಬೀತಾಗಿದೆ. ಬಂಧಿತ ಆರೋಪಿಗಳಲ್ಲಿ ಕೆಲವರು ಉನ್ನತ ಶಿಕ್ಷಣ ಪಡೆದ ವೈದ್ಯಕೀಯ ವೃತ್ತಿಪರರಾಗಿದ್ದು, ಇವರು ಅಲ್-ಖೈದಾ (AQIS) ಮತ್ತು ಅನ್ಸಾರ್ ಗಜ್ವತುಲ್ ಹಿಂದ್ (AGuH) ಸದ್ಧಾಂತಗಳಿಂದ ಪ್ರೇರಿತರಾಗಿ ಈ ಭೀಕರ ದಾಳಿ ನಡೆಸಿದ್ದರು ಎಂದು ಎನ್‌ಐಎ ಕೋರ್ಟ್‌ಗೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.