ಹೈದರಾಬಾದ್: ವಕ್ಫ್ ಆಸ್ತಿಗಳ ಅತಿಕ್ರಮಣದ ವಿರುದ್ಧ ನಿರಂತರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಹೈದರಾಬಾದ್ನ ಹಿರಿಯ ವಕೀಲರೊಬ್ಬರನ್ನು ಶನಿವಾರ ಬೆಳಗಿನ ಜಾವ ಅವರ ಮನೆಯ ಹೊರಗಡೆಯೇ ಸ್ಕಾರ್ಪಿಯೋ ಕಾರಿನಿಂದ ಡಿಕ್ಕಿ ಹೊಡೆಸಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಖಾಜಾ ಮೊಯಿಜುದ್ದೀನ್ (63) ಕೊಲೆಯಾದ ದುರ್ದೈವಿ ವಕೀಲರು. ಶಾಂತಿ ನಗರದಲ್ಲಿರುವ ಅವರ ನಿವಾಸದ ಬಳಿಯೇ ಈ ಘಟನೆ ನಡೆದಿದ್ದು, ಸದ್ಯ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ.
ಘಟನೆ ಹಿನ್ನೆಲೆ:
ಶನಿವಾರ ಬೆಳಿಗ್ಗೆ ಸುಮಾರು 5.30 ರ ಸುಮಾರಿಗೆ ವಕೀಲ ಖಾಜಾ ಮೊಯಿಜುದ್ದೀನ್ ಅವರು ಈಜು ತರಬೇತಿಗೆಂದು ಮನೆಯಿಂದ ಹೊರಟಿದ್ದರು. ಅವರು ತಮ್ಮ ಕಾರನ್ನು ಹತ್ತಲು ಮುಂದಾದಾಗ, ಹಿಂದಿನಿಂದ ಅತಿ ವೇಗವಾಗಿ ಬಂದ ಹಸಿರು ಬಣ್ಣದ ಸ್ಕಾರ್ಪಿಯೋ ಎಸ್ಯುವಿ (SUV) ಕಾರು ಅವರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೊಯಿಜುದ್ದೀನ್ ಅವರು ಸುಮಾರು 20 ಅಡಿ ದೂರಕ್ಕೆ ಹಾರಿ ಬಿದ್ದಿದ್ದಾರೆ. ಕೃತ್ಯ ಎಸಗಿದ ತಕ್ಷಣ ದುಷ್ಕರ್ಮಿಗಳು ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮೊಯಿಜುದ್ದೀನ್ ಅವರನ್ನು ತಕ್ಷಣವೇ ಮಹಾವೀರ್ ಆಸ್ಪತ್ರೆಗೆ, ತದನಂತರ ಅಬಿಡ್ಸ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 12.30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರ ಮಗ ಹಾಗೂ ವಕೀಲರೂ ಆಗಿರುವ ಮೊಹಮ್ಮದ್ ಫರ್ಹಾನ್ ಅವರು ಈ ಹತ್ಯೆಯ ಹಿಂದೆ ನಗರದ ಇಬ್ಬರು ಪ್ರಮುಖ ಶಿಕ್ಷಣ ತಜ್ಞರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ತೀವ್ರ ಕಾನೂನು ವಿವಾದವೇ ಈ ಕೊಲೆಗೆ ಪ್ರಮುಖ ಕಾರಣ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು ಗನ್ಫೌಂಡ್ರಿಯಲ್ಲಿರುವ ಅವರ ಕಚೇರಿ ಮೇಲೆ ದಾಳಿಯಾಗಿತ್ತು. ಮೂರು ವರ್ಷಗಳ ಹಿಂದೆ ನಮ್ಮ ಮನೆಯ ಬಳಿಯ ಮಸೀದಿ ಹತ್ತಿರವೂ ಇದೇ ರೀತಿ ಗಾಡಿಯಿಂದ ಡಿಕ್ಕಿ ಹೊಡೆಸುವ ಪ್ರಯತ್ನ ನಡೆದಿತ್ತು. ಕೇಸ್ ಹಿಂಪಡೆಯಲು ಬೆದರಿಕೆ ಕರೆಗಳು, ಹಣದ ಆಮಿಷಗಳು ಬರುತ್ತಿದ್ದವು. ಆರು ತಿಂಗಳ ಹಿಂದೆ ನನಗೂ ಕೂಡ ಬೆದರಿಕೆ ಹಾಕಲಾಗಿತ್ತು,” ಎಂದು ಮಗ ಫರ್ಹಾನ್ ಆತಂಕ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಿಕಂದರಾಬಾದ್ ಡಿಸಿಪಿ ರಕ್ಷಿತಾ ಕೃಷ್ಣ ಮೂರ್ತಿ ಅವರು ಪ್ರತಿಕ್ರಿಯಿಸಿದ್ದು, “ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಈಗಾಗಲೇ 5 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಸೆರೆಹಿಡಿಯಲಾಗುವುದು,” ಎಂದು ತಿಳಿಸಿದ್ದಾರೆ.
Hyderabad: Senior advocate Khaja Moizuddin died after a suspected hit-and-run.
Adv Khaja was fighting legal battle against illegal occupation and privatisation of waqf properties.
Son alleges that the attack may be linked to his long legal battle against Waqf Mafias… pic.twitter.com/37YGfH0qCP
— Rupsy Saini (@ZiviiBloom) May 23, 2026








