ಕಲಬುರಗಿ: ನೀಟ್ (NEET) ಪರೀಕ್ಷೆ ಬರೆದ ಬೆನ್ನಲ್ಲೇ ನಗರದ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೇಲ್ನೋಟಕ್ಕೆ ನೀಟ್ ಪರೀಕ್ಷೆಯ ಒತ್ತಡದಿಂದ ಈ ದುರಂತ ಸಂಭವಿಸಿದೆ ಎಂದು ಭಾವಿಸಲಾಗಿತ್ತಾದರೂ, ಇದೀಗ ಆಕೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೇ ಫೇಲ್ ಆಗಿದ್ದ ಆಘಾತಕಾರಿ ಸತ್ಯ ತಡವಾಗಿ ಬೆಳಕಿಗೆ ಬಂದಿದೆ. ಹೆತ್ತವರಿಗೆ ಸುಳ್ಳು ಹೇಳಿದ್ದೇ ಈ ಇಡೀ ದುರಂತಕ್ಕೆ ಮುಖ್ಯ ಕಾರಣ ಎಂಬುದು ಬಹಿರಂಗವಾಗಿದೆ.
ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯ ಫಲಿತಾಂಶ ಬಂದಾಗ ವಿದ್ಯಾರ್ಥಿನಿ ಭಾಗ್ಯಶ್ರೀ ತನಗೆ ಶೇಕಡಾ 92 ರಷ್ಟು ಅಂಕಗಳು ಬಂದಿವೆ ಎಂದು ಪೋಷಕರ ಬಳಿ ಸುಳ್ಳು ಹೇಳಿಕೊಂಡಿದ್ದಳು. ಮಗಳ ಮಾತನ್ನು ಸಂಪೂರ್ಣವಾಗಿ ನಂಬಿದ್ದ ಹೆತ್ತವರು, ಆಕೆಯ ವೈದ್ಯಕೀಯ ಶಿಕ್ಷಣದ ಕನಸಿಗೆ ಹೆಗಲು ಕೊಟ್ಟು ನೀಟ್ ಪರೀಕ್ಷೆ ಬರೆಯಲು ಸಂಪೂರ್ಣ ಬೆಂಬಲ ನೀಡಿದ್ದರು. ಪೋಷಕರ ಪ್ರೋತ್ಸಾಹದೊಂದಿಗೆ ಇತ್ತೀಚೆಗಷ್ಟೇ ಭಾಗ್ಯಶ್ರೀ ನೀಟ್ ಪರೀಕ್ಷೆಯನ್ನೂ ಬರೆದು ಮುಗಿಸಿದ್ದಳು.
ಆದರೆ ಇದೀಗ ಲಭ್ಯವಾಗಿರುವ ಅಂಕಪಟ್ಟಿ (Marks Card) ಕಹಿಯಾದ ಸತ್ಯವನ್ನು ಬಿಚ್ಚಿಟ್ಟಿದೆ. ಆಕೆ ಮೊದಲ ಬಾರಿ ಬರೆದಿದ್ದ ದ್ವಿತೀಯ ಪಿಯುಸಿಯ ಗಣಿತ (Mathematics) ಮತ್ತು ಭೌತಶಾಸ್ತ್ರ (Physics) ಪರೀಕ್ಷೆಗಳಲ್ಲಿ ಫೇಲ್ ಆಗಿದ್ದಳು. ತಾನು ಅನುತ್ತೀರ್ಣಗೊಂಡ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟಿದ್ದ ಭಾಗ್ಯಶ್ರೀ, ತದನಂತರ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ದ್ವಿತೀಯ ಪಿಯುಸಿಯ ಪರೀಕ್ಷೆ-2 (ಮರು ಪರೀಕ್ಷೆ) ಬರೆದಿದ್ದಳು.
ಮರು ಪರೀಕ್ಷೆಯಲ್ಲೂ ಆಕೆಗೆ ಅದೃಷ್ಟ ಕೈಕೊಟ್ಟಿತ್ತು. ದ್ವಿತೀಯ ಪರೀಕ್ಷೆಯ ಫಲಿತಾಂಶದಲ್ಲಿ ಆಕೆ ಭೌತಶಾಸ್ತ್ರದಲ್ಲಿ 51 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದರೂ, ಗಣಿತ ವಿಷಯದಲ್ಲಿ ಕೇವಲ 24 ಅಂಕಗಳನ್ನು ಪಡೆಯಲಷ್ಟೇ ಶಕ್ತಳಾಗಿದ್ದಳು. ಕಾಲೇಜಿನಿಂದ ನೀಡಲಾಗುವ 20 ಇಂಟರ್ನಲ್ (ಆಂತರಿಕ) ಅಂಕಗಳನ್ನು ಸೇರಿಸಿದ ಬಳಿಕವೂ ಆಕೆಗೆ ಗಣಿತದಲ್ಲಿ ಪಾಸ್ ಆಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆಕೆ ಪಿಯುಸಿ ಪರೀಕ್ಷೆಯಲ್ಲಿ ಅಧಿಕೃತವಾಗಿ ಅನುತ್ತೀರ್ಣಳಾಗಿದ್ದಳು.
ದ್ವಿತೀಯ ಪಿಯುಸಿಯ ಪರೀಕ್ಷೆ-2 ರ ಫಲಿತಾಂಶವು ಮೇ 21 ರಂದು ಪ್ರಕಟವಾಗಿತ್ತು. ತಾನು ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿರುವ ವಿಷಯ ಮನೆಯವರಿಗೆ ಗೊತ್ತಾದರೆ ಎಲ್ಲಿ ಬೈಯುತ್ತಾರೋ ಅಥವಾ ತನ್ನ ಮೇಲಿಟ್ಟಿದ್ದ ಹೆತ್ತವರ ಅಪಾರ ನಿರೀಕ್ಷೆ ಸುಳ್ಳಾಯಿತಲ್ಲ ಎಂಬ ತೀವ್ರ ಮನಸ್ತಾಪ, ಅಪರಾಧ ಪ್ರಜ್ಞೆ ಹಾಗೂ ಭಯ ಆಕೆಯನ್ನು ಕಾಡಿತ್ತು. ಇದೇ ಮಾನಸಿಕ ಒತ್ತಡವನ್ನು ತಡೆದುಕೊಳ್ಳಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆಯ ಕಠಿಣ ಹಾದಿ ಹಿಡಿದಿರಬಹುದು ಎಂಬ ಬಲವಾದ ಶಂಕೆ ಇದೀಗ ವ್ಯಕ್ತವಾಗಿದೆ.








