ಮಂಡ್ಯ: ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರ ನಿದ್ದೆ ಗೆಡಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದು ಸೆರೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಸಮೀಪದ ಸಿದ್ದೆಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ:
ಸಿದ್ದೆಗೌಡನದೊಡ್ಡಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆಯ ಹಾವಳಿ ತೀವ್ರವಾಗಿತ್ತು. ಗ್ರಾಮದೊಳಗೆ ನುಗ್ಗುತ್ತಿದ್ದ ಈ ಚಿರತೆ, ಗ್ರಾಮಸ್ಥರ ಸಾಕುಪ್ರಾಣಿಗಳಾದ ಕುರಿ ಮತ್ತು ನಾಯಿಗಳನ್ನು ಬೇಟೆಯಾಡಿ ಬಲಿ ಪಡೆದುಕೊಳ್ಳುತ್ತಿತ್ತು. ಇದರಿಂದ ಭೀತಿಗೊಳಗಾಗಿದ್ದ ಗ್ರಾಮಸ್ಥರು ಸಂಜೆ ಕತ್ತಲಾಗುತ್ತಲೇ ಮನೆಯಿಂದ ಹೊರಬರಲು ಹೆದರುವಂತಾಗಿತ್ತು. ಚಿರತೆಯನ್ನು ತಕ್ಷಣವೇ ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ತೀವ್ರ ಒತ್ತಾಯ ಹಾಗೂ ದೂರು ಸಲ್ಲಿಸಿದ್ದರು.
12 ದಿನಗಳ ಕಾರ್ಯಾಚರಣೆ:
ಗ್ರಾಮಸ್ಥರ ದೂರಿನ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿದ್ದ ಅರಣ್ಯಾಧಿಕಾರಿಗಳು, ಚಿರತೆ ಓಡಾಡುವ ಜಾಗವನ್ನು ಗುರುತಿಸಿ ಸುಮಾರು 12 ದಿನಗಳ ಹಿಂದೆಯೇ ಗ್ರಾಮದ ಸಮೀಪ ಬೋನನ್ನು ಇರಿಸಿದ್ದರು. ಚಿರತೆಯನ್ನು ಆಕರ್ಷಿಸಲು ಬೋನಿನೊಳಗೆ ನಾಯಿಯೊಂದನ್ನು ಎರೆಡನ್ನಾಗಿ ಬಳಸಲಾಗಿತ್ತು.
ಶನಿವಾರ ರಾತ್ರಿ ಸೆರೆ:
ಶನಿವಾರ ರಾತ್ರಿ ಬೋನಿನಲ್ಲಿದ್ದ ನಾಯಿಯನ್ನು ತಿನ್ನಲು ಬಂದ ಚಿರತೆ, ಆಮಿಷಕ್ಕೆ ಬಿದ್ದು ಬೋನಿನೊಳಗೆ ನುಗ್ಗಿದೆ. ಈ ವೇಳೆ ಚಿರತೆ ಬೋನಿನೊಳಗೆ ಸಿಲುಕಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಗವಿಯಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೋನಿಗೆ ಬಿದ್ದಿದ್ದ ಚಿರತೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮತ್ತಷ್ಟು ಚಿರತೆಗಳ ಸೆರೆಗೆ ಆಗ್ರಹ:
ಚಿರತೆ ಸೆರೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಸಿದ್ದೆಗೌಡನದೊಡ್ಡಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಇದೇ ವ್ಯಾಪ್ತಿಯಲ್ಲಿ ಇನ್ನೂ ಕೆಲವು ಚಿರತೆಗಳು ಮುಕ್ತವಾಗಿ ತಿರುಗಾಡುತ್ತಿದ್ದು, ಸಾರ್ವಜನಿಕರ ಹಾಗೂ ಸಾಕುಪ್ರಾಣಿಗಳ ರಕ್ಷಣೆಯ ಹಿತದೃಷ್ಟಿಯಿಂದ ಅವುಗಳನ್ನೂ ಸಹ ಶೀಘ್ರದಲ್ಲೇ ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮತ್ತೊಮ್ಮೆ ಆಗ್ರಹಿಸಿದ್ದಾರೆ.








