ಕ್ವೆಟ್ಟಾ: ಪಾಕಿಸ್ತಾನದ ಅಶಾಂತ ಪೀಡಿತ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಲ್ಲಿ ಭೀಕರ ಭಯೋತ್ಪಾದನಾ ದಾಳಿ ನಡೆದಿದೆ. ಇಲ್ಲಿನ ರೈಲ್ವೆ ಹಳಿ ಬಳಿ ಪ್ರಯಾಣಿಕರ ರೈಲನ್ನು ಗುರಿಯಾಗಿಸಿಕೊಂಡು ನಡೆಸಲಾದ ಶಂಕಿತ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಕನಿಷ್ಠ 20ಕ್ಕೂ ಹೆಚ್ಚು ಜನ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ಥಳೀಯ ಪೊಲೀಸ್ ಮತ್ತು ಮಾಧ್ಯಮ ಮೂಲಗಳ ಮಾಹಿತಿ ಪ್ರಕಾರ, ಕ್ವೆಟ್ಟಾದ ಚಮನ್ ಫಾಟಕ್ ಪ್ರದೇಶದ ಬಳಿ ರೈಲು ಚಲಿಸುತ್ತಿದ್ದಾಗ ಈ ಪ್ರಬಲ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಪ್ಯಾಸೆಂಜರ್ ರೈಲಿನ ಎಂಜಿನ್ ಹಾಗೂ ಬೋಗಿಗಳಿಗೆ ಭಾಗಶಃ ಹಾನಿಯಾಗಿದ್ದು, ಹತ್ತಿರದಲ್ಲೇ ನಿಲ್ಲಿಸಲಾಗಿದ್ದ ಸುಮಾರು 10ಕ್ಕೂ ಹೆಚ್ಚು ವಾಹನಗಳು ನುಜ್ಜುಗುಜ್ಜಾಗಿವೆ. ಅಲ್ಲದೆ, ಸುತ್ತಮುತ್ತಲಿನ ಕಟ್ಟಡಗಳ ಕಿಟಕಿ ಗಾಜುಗಳು ಪುಡಿಯಾಗಿವೆ.
ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪಾಕಿಸ್ತಾನಿ ಭದ್ರತಾ ಪಡೆಗಳು ಮತ್ತು ರಕ್ಷಣಾ ಸಿಬ್ಬಂದಿ ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಕ್ವೆಟ್ಟಾದ ಸಿವಿಲ್ ಆಸ್ಪತ್ರೆ ಹಾಗೂ ಹತ್ತಿರದ ಮಿಲಿಟರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ.
ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಸಕ್ರಿಯವಾಗಿರುವ ನಿಷೇಧಿತ ಉಗ್ರಗಾಮಿ ಸಂಘಟನೆಗಳು ಈ ಹಿಂದೆ ಕೂಡ ರೈಲು ನಿಲ್ದಾಣ ಹಾಗೂ ಪ್ರಯಾಣಿಕರ ರೈಲುಗಳನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದವು. ಸದ್ಯದ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಅಧಿಕೃತವಾಗಿ ವಹಿಸಿಕೊಂಡಿಲ್ಲವಾದರೂ, ಇದು ಬಲೂಚ್ ಪ್ರತ್ಯೇಕತಾವಾದಿಗಳ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಬೆನ್ನಲ್ಲೇ ರೈಲ್ವೆ ಮಾರ್ಗಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.








