ವಾಷಿಂಗ್ಟನ್ :ವಿಶ್ವ ರಾಜಕಾರಣದ ಅತ್ಯಂತ ದೊಡ್ಡ ಆತಂಕಕ್ಕೆ ಸದ್ಯದಲ್ಲೇ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಐತಿಹಾಸಿಕ ಮಧ್ಯಂತರ ಶಾಂತಿ ಒಪ್ಪಂದವೊಂದು (Interim Peace Deal) ಸಿದ್ಧಗೊಂಡಿದ್ದು, ಮುಂದಿನ 24 ಗಂಟೆಗಳ ಒಳಗಾಗಿ ಉಭಯ ದೇಶಗಳಿಂದ ಜಂಟಿ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ‘ಟ್ರುತ್ ಸೋಷಿಯಲ್’ (Truth Social) ಖಾತೆಯಲ್ಲಿ ಇದನ್ನು ಖಚಿತಪಡಿಸಿದ್ದು, “ಒಪ್ಪಂದದ ಬಹುತೇಕ ಮಾತುಕತೆಗಳು ಪೂರ್ಣಗೊಂಡಿವೆ. ಅಂತಿಮ ಹಂತದ ಸೂಕ್ಷ್ಮ ವಿವರಗಳ ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲೇ ಒಪ್ಪಂದ ಪ್ರಕಟವಾಗಲಿದೆ,” ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಮತ್ತು ಕತಾರ್ ದೇಶಗಳ ಮಧ್ಯಸ್ಥಿಕೆಯಲ್ಲಿ ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ರಹಸ್ಯ ಮಾತುಕತೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಶನಿವಾರದಂದು ಅಧ್ಯಕ್ಷ ಟ್ರಂಪ್ ಅವರು ಭಾರತ, ಇಸ್ರೇಲ್, ಸೌದಿ ಅರೇಬಿಯಾ, ಯುಎಇ, ಕತಾರ್, ಪಾಕಿಸ್ತಾನ ಹಾಗೂ ಟರ್ಕಿ ಸೇರಿದಂತೆ ಮಧ್ಯಪ್ರಾಚ್ಯದ ಪ್ರಮುಖ ಜಾಗತಿಕ ನಾಯಕರೊಂದಿಗೆ ಸರಣಿ ಫೋನ್ ಕರೆಗಳ ಮೂಲಕ ಸುದೀರ್ಘ ಚರ್ಚೆ ನಡೆಸಿದ ನಂತರ ಈ ದೊಡ್ಡ ಬೆಳವಣಿಗೆಯಾಗಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆಗಿನ ಮಾತುಕತೆಯೂ ಯಶಸ್ವಿಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಮೂಲಗಳ ಪ್ರಕಾರ, ಈ ಒಪ್ಪಂದವು ಪ್ರಮುಖವಾಗಿ ಮೂರು ಹಂತಗಳನ್ನು ಒಳಗೊಂಡಿದೆ:
ಯುದ್ಧ ವಿರಾಮದ ವಿಸ್ತರಣೆ: ಮುಂದಿನ 60 ದಿನಗಳ ಕಾಲ ಉಭಯ ದೇಶಗಳ ನಡುವೆ ಯಾವುದೇ ಸೈನಿಕ ದಾಳಿಗಳು ನಡೆಯುವುದಿಲ್ಲ.
’ಸ್ಟ್ರೈಟ್ ಆಫ್ ಹಾರ್ಮುಜ್’ ಮುಕ್ತ: ಜಾಗತಿಕ ಇಂಧನ ಸಾಗಣೆಯ ಜೀವನಾಡಿಯಾಗಿರುವ, ಇರಾನ್ ನಿರ್ಬಂಧಿಸಿದ್ದ ‘ಸ್ಟ್ರೈಟ್ ಆಫ್ ಹಾರ್ಮುಜ್’ ಜಲಮಾರ್ಗವನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸದ್ಯದಲ್ಲೇ ಮುಕ್ತಗೊಳಿಸಲಾಗುವುದು.
ನಿರ್ಬಂಧಗಳ ಸಡಿಲಿಕೆ ಮತ್ತು ಆಸ್ತಿ ಬಿಡುಗಡೆ: ಅಮೆರಿಕವು ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಹಂತ-ಹಂತವಾಗಿ ಸಡಿಲಿಸಲಿದೆ ಮತ್ತು ವಿದೇಶಿ ಬ್ಯಾಂಕುಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್ನ ಸುಮಾರು 25 ಬಿಲಿಯನ್ ಡಾಲರ್ ಆಸ್ತಿಯನ್ನು ಮುಕ್ತಗೊಳಿಸಲಿದೆ.








