ನವದೆಹಲಿ:ಭಾರತದ ಯುವ ಸಮೂಹದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ವಿಡಂಬನಾತ್ಮಕ ಆನ್‌ಲೈನ್ ಆಂದೋಲನ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಅಧಿಕೃತ ವೆಬ್‌ಸೈಟ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳನ್ನು ನಿರ್ಬಂಧಿಸಲಾಗಿದೆ. ಆದಾಗ್ಯೂ, “ನಮ್ಮ ಖಾತೆಗಳನ್ನು ಹ್ಯಾಕ್ ಮಾಡಬಹುದು ಅಥವಾ ತಡೆಹಿಡಿಯಬಹುದು, ಆದರೆ ಈ ಆಂದೋಲನವನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಶೀಘ್ರದಲ್ಲೇ ಹೊಸ ಮತ್ತು ಸುಸ್ಥಿರ ಯೋಜನೆಯೊಂದಿಗೆ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದೇವೆ,” ಎಂದು ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಬಾಸ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರುವ ಅಭಿಜೀತ್ ದಿಪ್ಕೆ ಮೇ 16, 2026 ರಂದು ಈ ವಿಡಂಬನಾತ್ಮಕ ಸಂಘಟನೆಯನ್ನು ಆರಂಭಿಸಿದ್ದರು. ನಿರುದ್ಯೋಗ, ನೀಟ್ (NEET) ಪೇಪರ್ ಲೀಕ್ ಹಾಗೂ ಶಿಕ್ಷಣ ವ್ಯವಸ್ಥೆಯ ವೈಫಲ್ಯಗಳ ವಿರುದ್ಧ ಮೀಮ್ಸ್‌ಗಳ ಮೂಲಕ ಧ್ವನಿ ಎತ್ತಿದ್ದ ಈ ಪಾರ್ಟಿ, ಕೇವಲ ಒಂದೇ ವಾರದಲ್ಲಿ ದೇಶಾದ್ಯಂತ ಕೋಟ್ಯಂತರ ಯುವಕರ ಗಮನ ಸೆಳೆದಿತ್ತು.
ಕೇಂದ್ರ ಸರ್ಕಾರದ ಕಠಿಣ ಕ್ರಮದ ವಿರುದ್ಧ ತಮ್ಮ ವೈಯಕ್ತಿಕ ಎಕ್ಸ್ ಖಾತೆಯಲ್ಲಿ ಆಕ್ರೋಶ ಹೊರಹಾಕಿರುವ ಅಭಿಜೀತ್, “ನಮ್ಮ ಅಧಿಕೃತ ಇನ್‌ಸ್ಟಾಗ್ರಾಮ್, ವೈಯಕ್ತಿಕ ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ಬ್ಯಾಕ್-ಅಪ್ ಅಕೌಂಟ್‌ಗಳು ಮತ್ತು ನಮ್ಮ ಅಧಿಕೃತ ವೆಬ್‌ಸೈಟ್ (cockroachjantaparty.org) ಅನ್ನು ಸಹ ಇಂಟರ್ನೆಟ್‌ನಿಂದ ತೆಗೆದುಹಾಕಲಾಗಿದೆ. ಪ್ರಸ್ತುತ ನಮ್ಮ ಯಾವುದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ನಮ್ಮ ನಿಯಂತ್ರಣದಲ್ಲಿಲ್ಲ. ಹಾಗಾಗಿ ಇದರ ನಂತರ ಬರುವ ಯಾವುದೇ ಪೋಸ್ಟ್‌ಗಳು ನಮ್ಮ ಅಧಿಕೃತ ಹೇಳಿಕೆಗಳಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಜೊತೆಗೆ, ತಮಗೆ ಇತ್ತೀಚೆಗೆ ಕೊಲೆ ಬೆದರಿಕೆಗಳು ಬಂದಿದ್ದು, ಅದರ ಸ್ಕ್ರೀನ್‌ಶಾಟ್‌ಗಳನ್ನೂ ಅವರು ಹಂಚಿಕೊಂಡಿದ್ದಾರೆ. “ಪೇಪರ್ ಲೀಕ್ ಮಾಡಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಹೊಸ ಭಾರತದಲ್ಲಿ, ಹೊಣೆಗಾರಿಕೆಯನ್ನು ಕೇಳಿದ ಕಾಕ್ರೋಚ್ ಜನತಾ ಪಾರ್ಟಿಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.








