ಬೆಂಗಳೂರು: ರಸ್ತೆ ಅಪಘಾತ ಸಂಭವಿಸಿದ ತಕ್ಷಣ ಸ್ಥಳದಿಂದ ಪಲಾಯನ ಮಾಡದೆ, ಗಾಯಾಳುವನ್ನು ಸ್ವತಃ ತನ್ನದೇ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಚಾಲಕನೊಬ್ಬನ ಜೈಲು ಶಿಕ್ಷೆಯನ್ನು ಹೈಕೋರ್ಟ್ ಕೇವಲ ಒಂದು ದಿನಕ್ಕೆ ಕಡಿತಗೊಳಿಸಿ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆಯ ನಿವಾಸಿ ರಿಯಾಜ್ ಅಹಮ್ಮದ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ನೀಡಿದೆ. ನಿರ್ಲಕ್ಷ್ಯದ ಚಾಲನೆಯಿಂದ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಧಿಸಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಹೈಕೋರ್ಟ್ ಮಾರ್ಪಡಿಸಿದೆ.
ಪ್ರಕರಣದ ಹಿನ್ನೆಲೆ:
2015ರ ಜುಲೈ 15ರಂದು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಪಂಜಂಬೂರು ಬೀಚ್ ರಸ್ತೆ ಬಳಿ ಅರ್ಜಿದಾರ ರಿಯಾಜ್ ಅಹಮ್ಮದ್ ಚಲಾಯಿಸುತ್ತಿದ್ದ ಕಾರು, ಆನಂದ್ ಶೆಟ್ಟಿ ಎಂಬ ಪಾದಚಾರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತ ನಡೆದ ತಕ್ಷಣ ರಿಯಾಜ್ ಮತ್ತು ಅವರ ಮಗ, ಗಂಭೀರವಾಗಿ ಗಾಯಗೊಂಡಿದ್ದ ಆನಂದ್ ಶೆಟ್ಟಿ ಅವರನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದರೆ, ದುರದೃಷ್ಟವಶಾತ್ ಆನಂದ್ ಶೆಟ್ಟಿಯವರು ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಸಾವನ್ನಪ್ಪಿದ್ದರು.
ಅಪಘಾತದ ನಂತರ ಚಾಲಕ ಸ್ಥಳದಿಂದ ಓಡಿಹೋಗದೆ, ಸಂತ್ರಸ್ತನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದು ಶಿಕ್ಷೆಯನ್ನು ಕಡಿಮೆ ಮಾಡಲು ಮುಖ್ಯ ಕಾರಣವಾಗಿದೆ. ಶಿಕ್ಷೆಗೆ ಗುರಿಯಾಗಿರುವ ರಿಯಾಜ್ ಕೂಡ ನಂತರದ ದಿನಗಳಲ್ಲಿ ಮತ್ತೊಂದು ಅಪಘಾತಕ್ಕೆ ಒಳಗಾಗಿ ಬಲಗಾಲಿಗೆ ರಾಡ್ ಅಳವಡಿಸಲಾಗಿದ್ದು, ಸದ್ಯ ವೃತ್ತಿಪರ ಚಾಲನೆ ಮಾಡಲು ಸಾಧ್ಯವಾಗದೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ ಎಂಬ ಅಂಶವನ್ನು ನ್ಯಾಯಪೀಠ ದಾಖಲೆಗಳ ಮೂಲಕ ಗಮನಿಸಿದೆ.ನ್ಯಾಯಾಲಯದ ಸಲಹೆಯಂತೆ, ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರು ಹೆಚ್ಚುವರಿ ಪರಿಹಾರ ನೀಡಿದರೆ ಶಿಕ್ಷೆ ಕಡಿತಗೊಳಿಸಲು ಒಪ್ಪಿಗೆ ಸೂಚಿಸಿದ್ದರು. ನ್ಯಾಯಾಲಯದ ಕಲಾಪ ಮುಗಿಯುವವರೆಗೆ ಮಾತ್ರ (ಒಂದು ದಿನ) ಚಾಲಕನಿಗೆ ಶಿಕ್ಷೆ ವಿಧಿಸಿದ ಪೀಠವು, ಇದರೊಂದಿಗೆ ಮೃತರ ಪತ್ನಿ ಮತ್ತು ಮಗನಿಗೆ ತಲಾ 50,000 ರೂ. ನಂತೆ ಒಟ್ಟು 1 ಲಕ್ಷ ರೂಪಾಯಿ ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶಿಸಿದೆ. ಈ ಮೊತ್ತವನ್ನು ಎರಡು ಕಂತುಗಳಲ್ಲಿ ಜೂನ್ 30ರ ಒಳಗಾಗಿ ಪಾವತಿಸಬೇಕು. ಒಂದು ವೇಳೆ ಈ ಹಣ ಪಾವತಿಸಲು ವಿಫಲವಾದರೆ, ಹಳೆಯ ಒಂದು ವರ್ಷದ ಜೈಲು ಶಿಕ್ಷೆ ತಾನಾಗಿಯೇ ಮರುಸ್ಥಾಪನೆಯಾಗಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಮಂಗಳೂರಿನ ಸೆಷನ್ಸ್ ನ್ಯಾಯಾಲಯವು ರಿಯಾಜ್ಗೆ 1 ವರ್ಷದ ಸಾಧಾರಣ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಿಯಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.








