ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ದೊಡ್ಡ ಸಿಹಿ ಸುದ್ದಿ ನೀಡಿದೆ. ಇದುವರೆಗೆ ಕೇವಲ 8ನೇ ತರಗತಿಯವರೆಗೆ ಮಾತ್ರ ಲಭ್ಯವಿದ್ದ RTE ಉಚಿತ ಶಿಕ್ಷಣ ಸೌಲಭ್ಯವನ್ನು ಇದೀಗ 9 ಮತ್ತು 10ನೇ ತರಗತಿಗಳಿಗೂ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇದರ ಅನ್ವಯ, 2025-26ನೇ ಸಾಲಿನಲ್ಲಿ 8ನೇ ತರಗತಿ ಮುಗಿಸಿದ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳು ಅದೇ ಖಾಸಗಿ ಶಾಲೆಯಲ್ಲಿ ಯಾವುದೇ ಶುಲ್ಕವಿಲ್ಲದೆ 9 ಮತ್ತು 10ನೇ ತರಗತಿ ಶಿಕ್ಷಣವನ್ನು ಮುಂದುವರಿಸಬಹುದಾಗಿದೆ.ಒಂದು ವೇಳೆ ಆರ್ಟಿಇ ಅಡಿಯಲ್ಲಿ ಪ್ರವೇಶ ಪಡೆದು, ಪ್ರಸಕ್ತ ಸಾಲಿನಲ್ಲಿ 9ನೇ ತರಗತಿಗೆ ಬಂದಿರುವ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಂದ ಶಾಲೆಗಳು ಈಗಾಗಲೇ ಶುಲ್ಕ ವಸೂಲಿ ಮಾಡಿದ್ದರೆ, ಆ ಶುಲ್ಕವನ್ನು ತಕ್ಷಣವೇ ಪೋಷಕರಿಗೆ ಹಿಂದಿರುಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಶುಲ್ಕ ಮರುಪಾವತಿ ಪ್ರಕ್ರಿಯೆಯನ್ನು ಆಯಾ ಜಿಲ್ಲಾ ಉಪನಿರ್ದೇಶಕರು (DDPI) ಖುದ್ದಾಗಿ ಗಮನಹರಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಟಿಸಿ ಪಡೆದಿದ್ದರೂ ಓದು ಮುಂದುವರಿಸಲು ಅವಕಾಶ
ಆರ್ಟಿಇ ಅವಧಿ ಮುಗಿಯಿತು ಎಂಬ ಕಾರಣಕ್ಕೆ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಈಗಾಗಲೇ ವರ್ಗಾವಣೆ ಪತ್ರ (TC) ಪಡೆದಿದ್ದರೂ ಅಥವಾ ಬೇರೆ ಶಾಲೆಗೆ ದಾಖಲಾತಿ ಬಯಸಿದ್ದರೂ ಸಹ, ಪೋಷಕರ ಒಪ್ಪಿಗೆಯ ಮೇರೆಗೆ ಅದೇ ಶಾಲೆಯಲ್ಲಿಯೇ 9 ಮತ್ತು 10ನೇ ತರಗತಿ ವ್ಯಾಸಂಗವನ್ನು ಉಚಿತವಾಗಿ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ.








